ದೆಹಲಿಯ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಎರಡು ದಿನಗಳ ನಂತರ ಸಾವನ್ನಪ್ಪಿದ 15 ವರ್ಷದ ಬಾಲಕಿಯ ಅಂಗಾಂಗಗಳನ್ನು ಆಸ್ಪತ್ರೆ ಅಧಿಕಾರಿಗಳು ಕಳವು ಮಾಡಿದ್ದಾರೆಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದು, ವೈದ್ಯಕೀಯ ಮಂಡಳಿಯಿಂದ ಶವ ಪರೀಕ್ಷೆ ನಡೆಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆಯ ನಂತರ ಬಾಲಕಿ ಸಾವನ್ನಪ್ಪಿದ್ದಳು. ಮೂತ್ರವನ್ನು ಸಂಗ್ರಹಿಸಲು ಬಳಸಲಾದ ಪ್ಲಾಸ್ಟಿಕ್ ಚೀಲಗಳು ಆಕೆಯ ಹೊಟ್ಟೆಯ ಭಾಗದಲ್ಲಿ ಕಂಡುಬಂದಿವೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಅಪೆಂಡಿಸೈಟಿಸ್‌ಗೆ ಆಪರೇಷನ್ ಮಾಡಿದರೂ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಆಕೆಯನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಮೃತಳ ಸಹೋದರ ಮೊಹಮ್ಮದ್ ಇರ್ಫಾನ್ ಹೇಳಿದ್ದಾರೆ.
ಉತ್ತರದ ಉಪ ಪೊಲೀಸ್ ಕಮಿಷನರ್ ಸಾಗರ್ ಸಿಂಗ್ ಕಲ್ಸಿ ಪ್ರಕಾರ, ಜನವರಿ 21 ರಂದು ಕೆಲವು ಕರುಳಿನ ಸಮಸ್ಯೆಯಿಂದಾಗಿ ಹುಡುಗಿಯನ್ನು HRH ಆಸ್ಪತ್ರೆಗೆ ದಾಖಲಿಸಿ ಜನವರಿ 24 ರಂದು ಶಸ್ತ್ರಚಿಕಿತ್ಸೆ ಮಾಡಲಾಯಿತು.
ಜನವರಿ 26 ರಂದು ಆಕೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ ಬಳಿಕ ಯಾವುದೇ ರೀತಿಯ ದೂರು ನೀಡದೆ ಪೋಷಕರು ಆಕೆಯ ದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದ್ದಾರೆ. ಅವರ ಮನೆಗೆ ತಲುಪಿದ ನಂತರ ಅವರು ಪೊಲೀಸರಿಗೆ ಕರೆ ಮಾಡಿ ಬಾಲಕಿಯ ದೇಹದಿಂದ ಕೆಲವು ಅಂಗಗಳನ್ನು ತೆಗೆದುಹಾಕಲಾಗಿದೆ ಎಂದು ಶಂಕಿಸಿದ್ದಾರೆ ಎಂದು ಅವರು ಹೇಳಿದರು.
ಶಹದಾರದ ಜಗಪರ್ವೇಶ್ ಆಸ್ಪತ್ರೆಯಲ್ಲಿ ಉಸ್ಮಾನ್‌ಪುರ ಪೊಲೀಸ್ ಠಾಣೆಯಿಂದ ಮೆಡಿಕೋ-ಲೀಗಲ್ ಪ್ರಕರಣವನ್ನು (ಎಂಎಲ್‌ಸಿ) ಸಿದ್ಧಪಡಿಸಲಾಗಿದೆ ಎಂದು ಡಿಸಿಪಿ ಹೇಳಿದರು. ಮೃತದೇಹವನ್ನು ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿ ಸಂರಕ್ಷಿಸಲಾಗಿದೆ ಮತ್ತು ಪ್ರಸ್ತುತ, ವೈದ್ಯಕೀಯ ಮಂಡಳಿಯಿಂದ ಮರಣೋತ್ತರ ಪರೀಕ್ಷೆಯನ್ನು ಪಡೆಯುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.