ಕಣ್ಣಾಮುಚ್ಚಾಲೆ ಆಟದ ವೇಳೆ ಬಾಂಗ್ಲಾದೇಶದ ಹುಡುಗ ಹಡಗಿನಲ್ಲಿ ಸಿಲುಕಿಹಾಕಿಕೊಂಡು 6 ದಿನದ ಬಳಿಕ ಹಡಗು ಮಲೇಷಿಯಾ ತಲುಪಿದಾಗ ಪತ್ತೆಯಾಗಿದ್ದಾನೆ. ಜನವರಿ 17 ರಂದು ಬಾಂಗ್ಲಾದೇಶದ ಚಿತ್ತಗಾಂಗ್‌ನಿಂದ ಪೋರ್ಟ್ ಕ್ಲಾಂಗ್ ತಲುಪಿದಾಗ ಶಿಪ್ಪಿಂಗ್ ಕಂಟೈನರ್‌ನಲ್ಲಿ ಹುಡುಗನನ್ನು ಕಂಡು ಮಲೇಷಿಯಾದ ಅಧಿಕಾರಿಗಳು ದಿಗ್ಭ್ರಮೆಗೊಂಡರು.
ಅದೃಷ್ಟವಶಾತ್ ಬಾಲಕ ಜೀವಂತವಾಗಿದ್ದು ಗೊಂದಲ ಮತ್ತು ಕೃಶ ಸ್ಥಿತಿಯಲ್ಲಿದ್ದನು. ಆರಂಭದಲ್ಲಿ ಇದನ್ನ ಮಾನವ ಕಳ್ಳಸಾಗಣೆ ಪ್ರಕರಣ ಎಂದು ಅಧಿಕಾರಿಗಳು ಶಂಕಿಸಿದ್ದರು. ತನಿಖೆ ಬಳಿಕ ಸ್ಪಷ್ಟ ಚಿತ್ರಣವನ್ನ ಅಧಿಕಾರಿಗಳು ಕಂಡುಕೊಂಡಿದ್ದಾರೆ.
ವರದಿಗಳ ಪ್ರಕಾರ ಫಹೀಮ್ ಎಂದು ಗುರುತಿಸಲಾದ ಹುಡುಗ ಚಿತ್ತಗಾಂಗ್‌ನಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದಾಗ ಕಂಟೇನರ್‌ಗೆ ಪ್ರವೇಶಿಸಿ ಬೀಗ ಹಾಕಿಕೊಂಡು ನಂತರ ನಿದ್ರೆಗೆ ಜಾರಿದ್ದಾನೆ.
ಬಳಿಕ ನೌಕೆಯು ಜನವರಿ 11 ರಂದು ಚಿತ್ತಗಾಂಗ್‌ನಿಂದ ಹೊರಟು ಆರು ದಿನಗಳ ನಂತರ ಜನವರಿ 17 ರಂದು ಮಲೇಷಿಯಾ ತಲುಪಿತು.
ಕಂಟೈನರ್ ಒಳಗಿನಿಂದ ಬಾಲಕ ಸಹಾಯಕ್ಕಾಗಿ ಕಿರುಚಿದ್ದರೂ ಈ ವೇಳೆ ಯಾರಿಗೂ ಕೇಳಿಸಿಲ್ಲ. ಆರು ದಿನ ಆಹಾರ, ನೀರಿಲ್ಲದೆ ಬಾಲಕ ಬದುಕಿದ್ದು ಹೇಗೆ ಎಂಬುದು ಇಂದಿಗೂ ನಿಗೂಢವಾಗಿದೆ. ಮಲೇಷ್ಯಾದಲ್ಲಿ ಪತ್ತೆಯಾದಾಗ ಆತ ಜ್ವರದಿಂದ ಬಳಲುತ್ತಿದ್ದ ಎಂದು ವರದಿಯಾಗಿದೆ.
ಬಾಲಕ ಚೇತರಿಸಿಕೊಂಡ ನಂತರ ಮಲೇಷಿಯಾದ ಅಧಿಕಾರಿಗಳು ಅವನನ್ನು ಬಾಂಗ್ಲಾದೇಶಕ್ಕೆ ಕಳುಹಿಸುತ್ತಾರೆ.