ಆಧಾರ್ ಕಾರ್ಡ್ ಭಾರತೀಯರಿಗೆ ಬಹಳ ಮುಖ್ಯವಾದ ದಾಖಲೆ. ಈ ಕಾರ್ಡ್ ಇಲ್ಲದೆ ಯಾವುದೇ ಬ್ಯಾಂಕಿನ ಕೆಲಸ ಮಾಡಲು ಸಾಧ್ಯವಿಲ್ಲ. ಬಹುತೇಕ ಎಲ್ಲ ಕೆಲಸಗಳಿಗೂ ಆಧಾರ್ ಅಗತ್ಯವಾಗಿದೆ. ಈ ಮಧ್ಯೆ ಆಧಾರ್ ಮೂಲಕ ಇ-ಕೆವೈಸಿ ಸ್ಥಿರ ಬೆಳವಣಿಗೆಯನ್ನು ಕಾಣುತ್ತಿದೆ.
2022-23ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 84.8 ಕೋಟಿಗೂ ಹೆಚ್ಚು ಇ-ಕೆವೈಸಿ ವಹಿವಾಟುಗಳನ್ನು ಆಧಾರ್ ಬಳಸಿ ಮಾಡಲಾಗಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.18.53ರಷ್ಟು ಹೆಚ್ಚಾಗಿದೆ.
ಡಿಸೆಂಬರ್ನಲ್ಲಿಯೇ 32.49 ಕೋಟಿ ಇ-ಕೆವೈಸಿ ವಹಿವಾಟುಗಳನ್ನು ಆಧಾರ್ ಬಳಸಿ ಮಾಡಲಾಗಿದೆ. ಇದು ಹಿಂದಿನ ತಿಂಗಳಿಗಿಂತ ಶೇ.13 ರಷ್ಟು ಹೆಚ್ಚಾಗಿದೆ. ಆಧಾರ್ ಇ-ಕೆವೈಸಿ ಸೇವೆಯು ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಸೇವೆಗಳಿಗೆ ಪಾರದರ್ಶಕ, ಉತ್ತಮ ಗ್ರಾಹಕ ಅನುಭವವನ್ನು ಒದಗಿಸುತ್ತದೆ. ಸುಲಭವಾಗಿ ವ್ಯಾಪಾರ ಮಾಡಲು ಸಹಾಯ ಮಾಡುತ್ತದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ನಲ್ಲಿ ಆಧಾರ್ ಇ-ಕೆವೈಸಿ ವಹಿವಾಟುಗಳ ಸಂಖ್ಯೆ 23.56 ಕೋಟಿಯಷ್ಟಿತ್ತು. ನವೆಂಬರ್ನಲ್ಲಿ 28.75 ಕೋಟಿಗೆ ಏರಿದೆ.
2022ರ ಡಿಸೆಂಬರ್ ಅಂತ್ಯದ ವೇಳೆಗೆ, ಒಟ್ಟು ಆಧಾರ್ ಇ-ಕೆವೈಸಿ ವಹಿವಾಟುಗಳ ಸಂಖ್ಯೆ 1,382.73 ಕೋಟಿಗೆ ಏರಿದೆ. E-KYC ವಹಿವಾಟುಗಳನ್ನು ಆಧಾರ್ ಹೊಂದಿರುವವರ ಸ್ಪಷ್ಟ ಒಪ್ಪಿಗೆಯ ನಂತರ ಮಾತ್ರ ಮಾಡಲಾಗುತ್ತದೆ. ನಂತರ KYC ಗಾಗಿ ಭೌತಿಕ ದಾಖಲೆಗಳು ಮತ್ತು ವೈಯಕ್ತಿಕ ಪರಿಶೀಲನೆಯ ಅಗತ್ಯವಿರುವುದಿಲ್ಲ. 2022ರ ಡಿಸೆಂಬರ್ ಅಂತ್ಯದವರೆಗೆ ಸುಮಾರು 8,829.66 ಕೋಟಿ ಆಧಾರ್ ದೃಢೀಕರಣ ವಹಿವಾಟುಗಳನ್ನು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ದೇಶದ 1,100 ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಆಧಾರ್ ಬಳಸಲು ಸೂಚನೆ ನೀಡಲಾಗಿದೆ.