ಚಳಿಗಾಲ ಬಂತು ಅಂದ ತಕ್ಷಣ ಹಣ್ಣಿನ ಮಳಿಗೆಗಳಲ್ಲಿ ಕಿತ್ತಳೆಯದ್ದೇ ದರ್ಬಾರ್. ಈ ಸಮಯದಲ್ಲಿ ಕಿತ್ತಳೆ ಹಣ್ಣುಗಳು ತುಂಬಾನೇ ಸಿಹಿಯಾಗಿ ರಸಭರಿತವಾಗಿರುತ್ತವೆ. ಪ್ರತಿದಿನ ಹಣ್ಣು ತಿನ್ನೋದು ಕಷ್ಟ ಅಂತಾ ನೀವು ಅಂದುಕೊಳ್ಳಬಹುದು. ಈ ಸುಂದರ ಹಣ್ಣಿನಿಂದ ಹತ್ತಾರು ಬಗೆಯ ತಿನಿಸುಗಳನ್ನು ಮಾಡಬಹುದು.
ಆರೇಂಜ್ ಕ್ಯಾಂಡಿಡ್ ಪೀಲ್ಸ್ : ಸಾಮಾನ್ಯವಾಗಿ ನಾವು ಒಳಗಿರುವ ತೊಳೆಗಳನ್ನು ತಿಂದು ಕಿತ್ತಳೆ ಸಿಪ್ಪೆ ಬಿಸಾಡುತ್ತೇವೆ. ಆದ್ರೆ ಆ ಸಿಪ್ಪೆಯಿಂದ್ಲೂ ಅದ್ಭುತವಾದ ರೆಸಿಪಿ ತಯಾರಿಸಬಹುದು. ಅದೇ ಆರೇಂಜ್ ಕ್ಯಾಂಡಿಡ್ ಪೀಲ್ಸ್. ಕಿತ್ತಳೆ ಸಿಪ್ಪೆಯಲ್ಲಿರುವ ಬಿಳಿ ಭಾಗವನ್ನು ತೆಗೆದು 2 ಇಂಚು ಉದ್ದದ ಸ್ಲೈಸ್ ಗಳಾಗಿ ಕತ್ತರಿಸಿ. ಅದನ್ನು ಕುದಿಯುವ ನೀರಿನಲ್ಲಿ ಹಾಕಿ ಕೆಲವೇ ನಿಮಿಷ ಬಿಟ್ಟು ಹೊರತೆಗೆದು ನೀರನ್ನು ಸೋಸಿ ಇಡಿ. ಸಕ್ಕರೆಗೆ ಸ್ವಲ್ಪ ನೀರು ಹಾಕಿ ಪಾಕ ಬರುವವರೆಗೆ ಕುದಿಸಿ. ನಂತರ ಅದರಲ್ಲಿ ಕಿತ್ತಳೆ ಸಿಪ್ಪೆಯನ್ನು ನೆನೆಸಿಡಿ. ಎರಡು ದಿನಗಳ ನಂತರ ತಿನ್ನಬಹುದು.
ಕಿತ್ತಳೆ ಸಲಾಡ್ : ಸಲಾಡ್ ಗಳಲ್ಲಿ ಕಿತ್ತಳೆ ಹಣ್ಣು ಬಳಸಿದ್ರೆ ನಿಜಕ್ಕೂ ಟೇಸ್ಟಿಯಾಗಿರುತ್ತದೆ. ಸಲಾಡ್ ಮಾಡಲು ಅರ್ಧ ಕಪ್ ಕೊತ್ತಂಬರಿ ಸೊಪ್ಪು, ಸ್ವಲ್ಪ ಹೆಚ್ಚಿದ ಪುದೀನಾ, ಕಾಲು ಕಪ್ ಖರ್ಜೂರ, ಸಿಪ್ಪೆ ತೆಗೆದ ಒಂದು ಕಿತ್ತಳೆ ಹಣ್ಣು, 1 ಕಪ್ ಸಲಾಡ್ ಎಲೆ, 2 ಚಮಚ ಎಕ್ಸ್ ಟ್ರಾ ವರ್ಜಿನ್ ಆಲಿವ್ ಆಯಿಲ್, ಒಂದು ಚಮಚ ನಿಂಬೆ ರಸ, ಸ್ವಲ್ಪ ಬಾದಾಮಿ, ಉಪ್ಪು ಮತ್ತು ಕರಿಮೆಣಸಿನ ಪುಡಿ ಇಷ್ಟು ಪದಾರ್ಥಗಳು ಬೇಕು. ಇವನ್ನೆಲ್ಲ ಬೌಲ್ ಗೆ ಹಾಕಿ ಟಾಸ್ ಮಾಡಿದ್ರೆ ನಿಮ್ಮ ಸಲಾಡ್ ರೆಡಿ.
ಮಾಂಸಾಹಾರದಲ್ಲಿ ಕಿತ್ತಳೆ : ಮಾಂಸದ ಅಡುಗೆಗಳಲ್ಲಿ ಕಿತ್ತಳೆ ಹಣ್ಣುಗಳನ್ನು ಬಳಸಲಾಗುತ್ತದೆ. ಕುರಿ ಮಾಂಸದ ಡಿಶ್ ಗಳಿಗಂತೂ ಕಿತ್ತಳೆ ಹೇಳಿ ಮಾಡಿಸಿದಂತಿರುತ್ತದೆ. ಅಷ್ಟೇ ಅಲ್ಲ ರುಚಿಕರ ರೆಸಿಪಿಗೆ ಸೈಡ್ಸ್ ಆಗಿ ಸಾಸ್ ತಯಾರಿಸಲು ಕೂಡ ಕಿತ್ತಳೆ ರಸವನ್ನು ಬಳಸಬಹುದು. ಸ್ವಲ್ಪ ಸೋಯಾ ಸಾಸ್, ಪೆಪ್ಪರ್ ಕಾರ್ನ್ ಅಥವಾ ವೈಟ್ ವೈನ್ ಜೊತೆಗೆ ಸ್ವಲ್ಪ ಕಿತ್ತಳೆ ರಸ ಸೇರಿಸಿದ್ರೆ ಟೇಸ್ಟ್ ಅದ್ಭುತವಾಗಿರುತ್ತದೆ.
ಆರೇಂಜ್ ಗ್ಲೇಜ್ : ಪ್ಲೇನ್ ಕೇಕ್ ಗಳಿಗೆ ಹೊಳಪು ನೀಡಲು ಕಿತ್ತಳೆ ಹಣ್ಣುಗಳನ್ನು ಬಳಸಲಾಗುತ್ತದೆ. ಚಿಕನ್ ಅಥವಾ ಕ್ಯಾರೆಟ್ ಜೊತೆಗೂ ಇದನ್ನು ಬಳಸಬಹುದು. ಒಂದು ಕಪ್ ಸಕ್ಕರೆ, 2 ಚಮಚ ಕಿತ್ತಳೆ ರಸ, ಅರ್ಧ ಚಮಚದಷ್ಟು ಆರೇಂಜ್ ಜೆಸ್ಟ್ ತೆಗೆದುಕೊಳ್ಳಿ. ಅದನ್ನೆಲ್ಲ ಬೌಲ್ ಗೆ ಹಾಕಿ ಚೆನ್ನಾಗಿ ಟಾಸ್ ಮಾಡಿದ್ರೆ ಆಯ್ತು. ಸಕ್ಕರೆಯ ಬದಲು ನೀವು ಜೇನುತುಪ್ಪವನ್ನು ಕೂಡ ಹಾಕಿಕೊಳ್ಳಬಹುದು.
ತರಕಾರಿಗಳ ಜೊತೆ ಕಿತ್ತಳೆ : ಸಸ್ಯಾಹಾರಿ ಊಟಕ್ಕೂ ಕಿತ್ತಳೆಯ ಕೊಡುಗೆ ಅಪಾರ. ಕ್ಯಾಬೇಜ್ ಹಾಗೂ ಕಿತ್ತಳೆ ಬಳಸಿ ನೀವು ಒಳ್ಳೆಯ ತಿನಿಸು ತಯಾರಿಸಬಹುದು. ಇದಕ್ಕೆ ಒಂದು ಕತ್ತರಿಸಿದ ಕ್ಯಾಬೇಜ್, ಒಂದು ಕಿತ್ತಳೆ ಹಣ್ಣು, ಒಂದು ಈರುಳ್ಳಿ, ಒಂದು ಚಮಚ ಬೆಣ್ಣೆ, 10 ಚಮಚ ವೆಜಿಟೇಬಲ್ ಸ್ಟಾಕ್, ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಗೂ ಅರ್ಧ ಚಮಚ ಸಕ್ಕರೆ ಬೇಕು. ಕಿತ್ತಳೆ ಸಿಪ್ಪೆಯನ್ನು ಸ್ವಲ್ಪ ತುರಿದಿಟ್ಟುಕೊಳ್ಳಿ, ಹಣ್ಣಿನ ರಸ ತೆಗೆದಿಟ್ಟುಕೊಳ್ಳಿ. ಬಾಣಲೆಯಲ್ಲಿ ಬೆಣ್ಣೆ ಹಾಕಿ ಹೆಚ್ಚಿದ ಈರುಳ್ಳಿಯನ್ನು ಹುರಿಯಿರಿ ಅದಕ್ಕೆ ಕ್ಯಾಬೇಜ್ ಹಾಕಿ ಮೂರ್ನಾಲ್ಕು ನಿಮಿಷ ಹುರಿಯಿರಿ. ಬಳಿಕ ತುರಿದ ಕಿತ್ತಳೆ ಸಿಪ್ಪೆ, ರಸ ಹಾಗೂ ವೆಜಿಟೇಬಲ್ ಸ್ಟಾಕ್ ಹಾಕಿ. ಸುಮಾರು 20 ನಿಮಿಷ ಸಣ್ಣ ಉರಿಯಲ್ಲಿಟ್ಟು ಬಳಿಕ ಅರ್ಧ ಚಮಚ ಸಕ್ಕರೆ ಹಾಕಿ ತೊಳಸಿ. ಬಿಸಿಬಿಸಿಯಾಗಿ ತಿನ್ನಿ.