ಹೊಸ ಬಟ್ಟೆ ಖರೀದಿ ಮಾಡುವುದು ಖುಷಿಯ ವಿಚಾರ. ಈಗ ಹೊಸ ಬಟ್ಟೆ ಖರೀದಿಸಲು ಕಾರಣಗಳೇ ಬೇಕಿಲ್ಲ. ನೋಡಿದ ಕೂಡಲೇ ಇಷ್ಟವಾಗುವ ಬಟ್ಟೆಗಳನ್ನು ಅಷ್ಟೇ ವೇಗವಾಗಿ ಖರೀದಿಸುವ ಕಾಲವಿದು. ಆದರೆ ಹೊಸ ಬಟ್ಟೆಗಳು ಬಹಳ ಬೇಗ ಮಾಸಿದರೆ, ಹೊಸ ಬಟ್ಟೆಯ ಹೊಳಪು ಹೊರಟು ಹೋದರೆ ಅಷ್ಟೇ ಬೇಸರವಾಗುವುದಂತೂ ನಿಜ.
ನೀವು ಖರೀದಿಸುವ ಬಟ್ಟೆಯ ಬಗ್ಗೆ ತಿಳಿದುಕೊಳ್ಳುವುದು ಇಲ್ಲಿ ಬಹಳ ಮುಖ್ಯ. ಎಲ್ಲಾ ಬಟ್ಟೆಗಳೂ ಒಂದೇ ಆಗಿರುವುದಿಲ್ಲ. ಕೆಲವು ನೂರಕ್ಕೆ ನೂರರಷ್ಟು ಹತ್ತಿಯದಾದರೆ ಇನ್ನೂ ಕೆಲವು ಹತ್ತಿಯ ಜೊತೆಗೆ ರೆಯಾನ್ ಮಿಶ್ರಿತವಾಗಿರುತ್ತದೆ. ಪಾಲಿಸ್ಟರ್, ಉಣ್ಣೆ, ರೆಗ್ಸಿನ್ ಹೀಗೆ ಬಟ್ಟೆಯ ಕ್ವಾಲಿಟಿ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಇದರ ಜೊತೆಗೆ ರೆಡಿಮೇಡ್ ಬಟ್ಟೆಯ ಕಾಲರ್ ಭಾಗದಲ್ಲಿ ಅಥವಾ ಬಟ್ಟೆಯ ಒಳ ಭಾಗವನ್ನು ಗಮನಿಸಿದರೆ ಆ ಬಟ್ಟೆಯನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬ ಮಾಹಿತಿ ಇರುತ್ತದೆ.
ಕೆಲವು ಬಟ್ಟೆಗಳನ್ನು ಕೈಯಲ್ಲೇ ಒಗೆಯಬೇಕು ಎಂಬ ಸೂಚನೆ ಇದ್ದರೆ ಇನ್ನೂ ಕೆಲವು ಬಟ್ಟೆಗಳನ್ನು ನೆರಳಲ್ಲಿ ಒಣಗಿಸಬೇಕು ಎಂಬ ಸೂಚನೆ ಕೊಟ್ಟಿರುತ್ತಾರೆ. ಬಟ್ಟೆಗಳನ್ನು ಇಸ್ತ್ರಿ ಮಾಡುವ ಕುರಿತಾಗಿಯೂ ಇದರಲ್ಲಿ ಮಾಹಿತಿ ಇರುತ್ತದೆ.
ಹಾಗಾಗಿ ಎಲ್ಲಾ ಬಟ್ಟೆಗಳನ್ನು ಒಂದೇ ರೀತಿಯಾಗಿ ಭಾವಿಸದೆ, ಒಟ್ಟಾಗಿ ವಾಷಿಂಗ್ ಮೆಷಿನ್ ನಲ್ಲಿ ಒಂದೇ ಮೋಡ್ ನಲ್ಲಿ ಒಗೆಯಲು ಹಾಕಿದಾಗ ನಿಮ್ಮ ಹೊಸ ಬಟ್ಟೆ ಬಹಳ ಬೇಗ ಹಳೆಯ ಬಟ್ಟೆಯಂತೆ ಕಾಣುವುದರಲ್ಲಿ ಸಂದೇಹವಿಲ್ಲ.