ಬೆಂಗಳೂರು: ಅರಣ್ಯದ ಅಂಚಿನ ಜಾಗಗಳಲ್ಲಿ ಮತ್ತು ಸರ್ಕಾರಿ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡ ಬಡ ಜನರನ್ನು ಒಕ್ಕಲಿಬ್ಬಿಸಲು ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಜಡಿಗೇನಹಳ್ಳಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 94ಸಿ ಮತ್ತು 94 ಸಿಸಿ ಅಡಿ ಅರ್ಜಿ ಪಡೆದು ಬಡ ಫಲಾನುಭವಿಗಳಿಗೆ ನಿವೇಶನದ ಹಕ್ಕು ಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ ಸರ್ಕಾರಿ ಜಮೀನು ಅಥವಾ ಅರಣ್ಯದಂಚಿನ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡವರ ಮನೆಗಳನ್ನು ತೆರವುಗೊಳಿಸಲಾಗುತ್ತಿತ್ತು. ಅಂತಹ ಬಡವರು ಸಾಕಷ್ಟು ಕಿರುಕುಳ ಎದುರಿಸಬೇಕಾಗಿತ್ತು. ಆದರೆ, ನಮ್ಮ ಸರ್ಕಾರ ಅದಕ್ಕೆ ಅವಕಾಶ ನೀಡುವುದಿಲ್ಲ. ಅರಣ್ಯದ ಅಂಚಿನಲ್ಲಿರುವ ಜನರನ್ನು ಒಕ್ಕಲೆಬ್ಬಿಸುವುದಿಲ್ಲ. ಸರ್ಕಾರಿ ಜಮೀನುಗಳಲ್ಲಿ ವಾಸವಾಗಿರುವ ಬಡವರನ್ನು ಒಕ್ಕಲಿಬ್ಬಿಸದೆ ಅವರಿಗೆ ಶೀಘ್ರದಲ್ಲೇ ನಿವೇಶನ ಹಕ್ಕು ಪತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಾಗುವಳಿ ಚೀಟಿ ಹೊಂದಿರುವ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳದಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಡ ನಿವೇಶನರಹಿತರ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಪರಿಶಿಷ್ಟ ಜಾತಿ ಪಂಗಡಗಳ ಜನರು ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ ತಕ್ಷಣ ಭೂ ಪರಿವರ್ತನೆ ಮಾಡಿಕೊಡಲು ಸುಧಾರಣಾ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.