ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, 28 ವರ್ಷದ ಮಹಿಳೆಯೊಬ್ಬರಿಗೆ ಗರ್ಭಿಣಿಯಾಗಲು ಮೂಳೆ ಪುಡಿ ಮಾಡಿ ಸೇವಿಸಲು ಬಲವಂತ ಮಾಡಲಾಗಿದೆ.
ಮಗುವಿನ ಹಂಬಲದಲ್ಲಿದ್ದ ಮಹಿಳೆಗೆ ಗರ್ಭ ಧರಿಸಿ ಮಗುವನ್ನು ಪಡೆಯುವ ಭರವಸೆ ನೀಡಿ ಮಾಟಮಂತ್ರದ ಭಾಗವಾಗಿ ಮಾನವ ಮೂಳೆಯಿಂದ ಮಾಡಿದ ಪುಡಿಯನ್ನು ಸೇವಿಸುವಂತೆ ಮಾಡಿದ ಆರೋಪದ ಮೇಲೆ 7 ಮಂದಿಯನ್ನು ಬಂಧಿಸಲಾಗಿದೆ. ಮಹಿಳೆಯ ಪತಿ, ಅವರ ಪೋಷಕರು, ಅವರ ಸಹೋದರ ಮತ್ತು ಇತರ ಸಂಬಂಧಿಕರು, ಮಹಿಳಾ ಮಾಂತ್ರಿಕಳನ್ನು ಬಂಧಿಸಲಾಗಿದೆ.
ಸಿನ್ಹಗಡ್ ರೋಡ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜಯಂತ್ ರಾಜೂರ್ಕರ್ ಪ್ರಕಾರ, 2019 ರಲ್ಲಿ ವಿವಾಹವಾದ ಸಂತ್ರಸ್ತೆಗೆ ಮಗು ಇರಲಿಲ್ಲ. ಆಕೆಯ ಪತಿ ಮತ್ತು ಅತ್ತೆಯರು, ಇತರ ಆರೋಪಿಗಳೊಂದಿಗೆ, ಅಮಾವಾಸ್ಯೆ ಸಮಯದಲ್ಲಿ ಅವಳನ್ನು ಗರ್ಭಧರಿಸಲು ಸಹಾಯ ಮಾಡುವ ಪ್ರಯತ್ನದಲ್ಲಿ ಮಾಟಮಂತ್ರದ ಆಚರಣೆಗಳನ್ನು ನಡೆಸುತ್ತಾರೆ. ಧಾರ್ಮಿಕ ವಿಧಿ ವಿಧಾನಗಳ ಭಾಗವಾಗಿ ತನಗೆ ಬಲವಂತವಾಗಿ ಮಾನವನ ಅಸ್ಥಿ ಮಿಶ್ರಿತ ನೀರನ್ನು ಕುಡಿಯಲು ಮತ್ತು ನಿರ್ದಿಷ್ಟ ಜಲಪಾತದಲ್ಲಿ ಸ್ನಾನ ಮಾಡಲು ಒತ್ತಾಯಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಆಚರಣೆಗಳಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿದ್ದಲ್ಲದೆ, ಆರೋಪಿಗಳು ಪೋಷಕರಿಂದ ಹಣ ಪಡೆದು ತರುವಂತೆ ಒತ್ತಾಯಿಸಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. 7 ವ್ಯಕ್ತಿಗಳ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.