
ಬೆಂಗಳೂರು: ಬಿಜೆಪಿಯ ಇಬ್ಬರು ಶಾಸಕರು ಕಾಂಗ್ರೆಸ್ ಗೆ ಬರಲು ಸಿದ್ಧರಾಗಿದ್ದಾರೆ. ಅದರಲ್ಲೂ ಹಾವೇರಿಯ ಇಬ್ಬರು ಶಾಸಕರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಹಾವೇರಿಯ ಹಾಲಿ ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆ ಎನ್ನುವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿ, ಶಿವಕುಮಾರ್ ಮೊದಲು ಅವರ ಪಕ್ಷದಲ್ಲಿರುವವರನ್ನು ಉಳಿಸಿಕೊಳ್ಳಲಿ. ಕಾಂಗ್ರೆಸ್ ನಲ್ಲಿ ಯಾರು ಉಳಿಯುತ್ತಾರೆ, ಯಾರು ಹೋಗುತ್ತಾರೆ ಎಂಬುದನ್ನು ಗಮನಿಸಲಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಿಂದ ಬಿಜೆಪಿಗೆ ಯಾರು ಯಾರು ಬರುತ್ತಾರೆಂಬದು ಡಿಕೆಶಿ ಅವರಿಗೂ ಗೊತ್ತಿದೆ. ಅವರಿಗೆ ಕೀಳರಿಮೆ ಭಾವನೆ ಇದೆ. ತಮ್ಮ ಕೀಳರಿಮೆ ಭಾವನೆ ಮುಚ್ಚಿಕೊಳ್ಳಲು ಮೇಲರಿಮೆ ಭಾವನೆಯಲ್ಲಿ ಮಾತನಾಡುತ್ತಾರೆ. ಈ ರೀತಿ ಹೇಳಿಕೆ ಕೊಡುವುದು ಡಿ.ಕೆ. ಶಿವಕುಮಾರ್ ಸ್ವಭಾವವಾಗಿದೆ ಎಂದು ಹೇಳಿದ್ದಾರೆ.