ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದ್ದು, ಈಗಾಗಲೇ ಗೂಗಲ್, ಮೈಕ್ರೋಸಾಫ್ಟ್, ಟ್ವಿಟರ್ ಮೊದಲಾದ ಐಟಿ ದಿಗ್ಗಜ ಕಂಪನಿಗಳು ಈ ಕಾರ್ಯ ಮಾಡಿವೆ. ಇದೀಗ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ ಕೂಡ ಇದೆ ಹಾದಿ ಹಿಡಿದಿದ್ದು 380 ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ.
ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿರುವುದಕ್ಕೆ ವಿಷಾದಿಸಿ ಸ್ವಿಗ್ಗಿ ಸಿಇಓ ಶ್ರೀಹರ್ಷ ಮೆಜೆಟಿ ಪತ್ರ ಬರೆದಿದ್ದು, ಅನಿವಾರ್ಯವಾಗಿ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂದಿದೆ ಎಂದು ತಿಳಿಸಿದ್ದಾರೆ. 380 ಮಂದಿ ಉದ್ಯೋಗಿಗಳಿಗೆ ಇ-ಮೇಲ್ ಮೂಲಕವೇ ಕೆಲಸದಿಂದ ತೆಗೆದು ಹಾಕಿರುವ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.
ಸ್ವಿಗ್ಗಿ ಅಗತ್ಯಕ್ಕಿಂತ ಹೆಚ್ಚಿನ ನೌಕರರನ್ನು ನೇಮಕ ಮಾಡಿಕೊಂಡಿದ್ದು ಹಾಗೂ ಆರ್ಥಿಕ ಪರಿಸ್ಥಿತಿ ಸರಿದೂಗಿಸುವ ಸಲುವಾಗಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ ಎಂದು ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಂಪನಿಗಳು ಉದ್ಯೋಗಿಗಳ ಕಡಿತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಉದ್ಯಮ ವಲಯದಲ್ಲಿ ಕೇಳಿ ಬರುತ್ತಿದೆ.