ಹೆಣ್ಣುಮಕ್ಕಳ ಕಣ್ಣನ್ನು ತಾವರೆಗೆ ಹೋಲಿಸಲಾಗತ್ತೆ. ಕಣ್ಣು ಕೇವಲ ನೋಟಕ್ಕಷ್ಟೇ ಅಲ್ಲ, ಭಾವನೆಗಳನ್ನು ದಾಟಿಸಬಲ್ಲ ಶಕ್ತಿಯುತ ಅಂಗ. ಮನುಷ್ಯನ ಬೇಸರ, ದುಃಖ, ಸಂತೋಷ, ನಗು ಎಲ್ಲವೂ ಕಣ್ಣುಗಳೇ ಹೇಳಿಬಿಡುತ್ತದೆ. ಇಂತಹ ಕಣ್ಣುಗಳು ನಮ್ಮ ಆತ್ಮವಿಶ್ವಾಸವನ್ನು ಸೂಚಿಸುತ್ತದೆ ಗೊತ್ತಾ?
ಸಾಮಾನ್ಯವಾಗಿ ನಾವು ಯಾರೊಂದಿಗಾದರೂ ಮಾತನಾಡುವಾಗ ಎದುರು ಇರುವವರ ಮುಖವನ್ನು ನೋಡುತ್ತಾ ಮಾತಾಡುತ್ತೇವೆ. ಆದರೆ ಆತ್ಮವಿಶ್ವಾಸದ ತೀವ್ರ ಕೊರತೆ ಇರುವವರನ್ನು ಗಮನಿಸಿ, ಅವರು ಎದುರು ಇರುವವರ ಕಣ್ಣುಗಳನ್ನು ನೋಡುತ್ತಾ ಮಾತನಾಡುವ ಧೈರ್ಯವೇ ಮಾಡುವುದಿಲ್ಲ. ನೆಲ ನೋಡುತ್ತಲೋ, ಅಕ್ಕ ಪಕ್ಕ ಮುಖ ತಿರುಗಿಸಿಕೊಂಡು ಮಾತನಾಡುವವರ ಆತ್ಮವಿಶ್ವಾಸ ಕಡಿಮೆ ಇದೆ ಎಂದೇ ಅರ್ಥ.
ಸುಳ್ಳು ಹೇಳುವವರು ಕೂಡ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ ಮಾಡಲಾರರು. ಹಾಗಾಗಿ ಆತ್ಮವಿಶ್ವಾಸವನ್ನು ಸೂಚಿಸುವ ಕಣ್ಣುಗಳು ನಮಗೆ ಬಹಳ ಮುಖ್ಯ. ದಿನದಲ್ಲಿ ಸ್ವಲ್ಪ ಹೊತ್ತಾದರೂ ಕನ್ನಡಿ ಮುಂದೆ ನಿಂತು ನಿಮ್ಮನ್ನು ನೀವು ನೋಡುತ್ತಾ ಮಾತನಾಡಿ. ಆಗ ಸಹಜವಾಗಿ ಮತ್ತೊಬ್ಬರೊಂದಿಗೆ ವ್ಯವಹರಿಸುವಾಗ ಅವರ ಮುಖ ದಿಟ್ಟಿಸಿ ಮಾತನಾಡುವ ವಿಶ್ವಾಸ ಮೂಡುತ್ತದೆ.