ಕಾರು ಖರೀದಿಸಿ ಅದನ್ನು ಮಾರಾಟ ಮಾಡುತ್ತಿದ್ದ ಖದೀಮರ ತಂಡವೊಂದು ಬಳಿಕ ಅದೇ ಕಾರನ್ನು ಮತ್ತೆ ಕಳವು ಮಾಡಿ ಮರು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಮಹಾರಾಷ್ಟ್ರ ಮೂಲದ ನಾಲ್ವರು ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಬಂಧಿಸಲಾಗಿದೆ.
ಮಹಾರಾಷ್ಟ್ರದ ಔರಂಗಬಾದಿನ ರವೀಂದ್ರ ದಾಮೋದರ ರಾಥೋಡ, ಗಂಡಇಂಗ್ಲಜ್ ತಾಲೂಕಿನ ದುಂಡಗಿಯ ಮಂಜುನಾಥ ಮಡಕೇರಿ, ಶಿವಪ್ರಸಾದ ಕೇರಿ ಹಾಗೂ ಸೋಮನಾಥ ಪಾಟೀಲ್ ಬಂಧಿತ ಆರೋಪಿಗಳಾಗಿದ್ದು, ಇವರುಗಳಿಂದ 7.30 ಲಕ್ಷ ರೂಪಾಯಿ ಮೌಲ್ಯದ ಕಾರು ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಹಳೆ ಕಾರು ಮಾರಾಟ ದಂಧೆ ಮಾಡುತ್ತಿದ್ದು ಇದಕ್ಕಾಗಿ ಗ್ರಾಹಕರಿಂದ ಕಾರುಗಳನ್ನು ಖರೀದಿಸುತ್ತಿದ್ದರು. ಬಳಿಕ ಇದಕ್ಕೆ ಜಿಪಿಎಸ್ ಅಳವಡಿಸಿ ಮರು ಮಾರಾಟ ಮಾಡುತ್ತಿದ್ದ ಇವರುಗಳು ಜಿಪಿಎಸ್ ಮೂಲಕ ಕಾರು ಯಾವ ಸ್ಥಳದಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ ಬಳಿಕ ಕಳವು ಮಾಡುತ್ತಿದ್ದರು. ಅದೇ ಕಾರಿಗೆ ನಕಲಿ ನಂಬರ್ ಪ್ಲೇಟ್ ಜೊತೆಗೆ ದಾಖಲೆಗಳನ್ನು ಸೃಷ್ಟಿಸಿ ಮತ್ತೊಮ್ಮೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇದೀಗ ಆರೋಪಿಗಳ ಬಂಧನವಾಗಿದೆ.