ಬೆಂಗಳೂರು: ಮದ್ಯ ಖರೀದಿಗೆ ನಿಗದಿಪಡಿಸಲಾಗಿದ್ದ ವಯೋಮಿತಿಯನ್ನು ಸಡಿಲಿಕೆ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ. ಈ ಕುರಿತಾಗಿ ವಿದ್ಯಾರ್ಥಿ ಸಂಘಟನೆಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮದ್ಯ ಖರೀದಿ ವಯೋಮಿತಿ ಸಡಿಲಿಕೆ ಮಾಡದಿರಲು ಸರ್ಕಾರ ನಿರ್ಧಾರ ಕೈಗೊಂಡಿದೆ.
ಮದ್ಯ ಖರೀದಿ ವಯೋಮಿತಿಯನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಕೆ ಮಾಡಲು ಅಬಕಾರಿ ಇಲಾಖೆ ನಿರ್ಧರಿಸಿ ಸಾರ್ವಜನಿಕರಿಂದ ಸಲಹೆ, ಅಭಿಪ್ರಾಯ ಕೇಳಲಾಗಿತ್ತು. ಈ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸರ್ಕಾರವೇ ಯುವಕರನ್ನು ಮದ್ಯಪಾನಕ್ಕೆ ಪ್ರೋತ್ಸಾಹಿಸಲು ಕುಮ್ಮಕ್ಕು ನೀಡುತ್ತಿದೆ ಎಂದು ವಿರೋಧ ವ್ಯಕ್ತವಾಗಿತ್ತು.
ಬೇರೆ ರಾಜ್ಯಗಳಲ್ಲಿ ಮದ್ಯ ಖರೀದಿಗೆ 18 ವರ್ಷ ವಯೋಮಿತಿ ನಿಗದಿ ಮಾಡಿದ್ದರೂ, ಕರ್ನಾಟಕದಲ್ಲಿ ಇದಕ್ಕೆ ಅವಕಾಶ ಕೊಡಬಾರದು ಎಂದು ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಖರೀದಿ ವಯೋಮಿತಿ ಸಡಿಲಿಕೆ ಕರಡು ನಿಯಮವನ್ನು ಅಬಕಾರಿ ಇಲಾಖೆ ಆಯುಕ್ತರು ಹಿಂಪಡೆದುಕೊಂಡಿದ್ದಾರೆ.