ಚಂಡೀಗಢ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನೂಪ್ ಗುಪ್ತ ಅವರು ಕೇವಲ ಒಂದು ಮತದ ಅಂತರದಿಂದ ಆಯ್ಕೆಯಾಗಿದ್ದು, ಸಂಸದೆ ಕಿರಣ್ ಖೇರ್ ತಮ್ಮ ಹಕ್ಕು ಚಲಾಯಿಸುವ ಮೂಲಕ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಕಾರಣರಾಗಿದ್ದಾರೆ.
ಹೌದು, ಚಂಡೀಗಢ ಮಹಾನಗರ ಪಾಲಿಕೆ ಸದಸ್ಯರಾಗಿ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷದಿಂದ ತಲಾ 14 ಮಂದಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ 6 ಸದಸ್ಯರನ್ನು ಹೊಂದಿದ್ದರೆ ಶಿರೋಮಣಿ ಅಕಾಲಿದಳ ಓರ್ವ ಸದಸ್ಯನನ್ನು ಹೊಂದಿದೆ.
ಆದರೆ ಮೇಯರ್ ಆಯ್ಕೆಗಾಗಿ ನಡೆದ ಚುನಾವಣೆಗೆ ಕಾಂಗ್ರೆಸ್ ಹಾಗೂ ಶಿರೋಮಣಿ ಅಕಾಲಿ ದಳ ಸದಸ್ಯರು ಗೈರು ಹಾಜರಾಗಿದ್ದರು. ಹೀಗಾಗಿ ಮೇಯರ್ ಸ್ಥಾನ ಬಿಜೆಪಿ ಅಥವಾ ಆಮ್ ಆದ್ಮಿ ಪಕ್ಷದ ಯಾರಿಗೆ ಒಲಿಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿತ್ತು.
ಈ ಚುನಾವಣೆಯಲ್ಲಿ ಒಟ್ಟು 29 ಮತಗಳು ಚಲಾವಣೆಯಾಗಿದ್ದು, 15 ಮತ ಪಡೆದ ಅನೂಪ್ ಗುಪ್ತಾ ಮೇಯರ್ ಆಗಿ ಆಯ್ಕೆಯಾದರು. ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ 14 ಮತಗಳನ್ನು ಗಳಿಸಿದ್ದು, ಚಂಡೀಗಢ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಕಿರಣ್ ಖೇರ್ ಅವರು ಸಹ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಹೀಗಾಗಿ ಅವರ ಮತ ಬಿಜೆಪಿ ಅಭ್ಯರ್ಥಿಗೆ ಹೋಗಿದ್ದು ಮೇಯರ್ ಆಗಿ ಆಯ್ಕೆಯಾಗಲು ನೆರವಾಯಿತು.