ಪ್ರೇಯಸಿ ಜೊತೆಗಿರಲು ವ್ಯಕ್ತಿಯೊಬ್ಬ ತನ್ನ ಅಪಹರಣವಾದಂತೆ ನಾಟಕ ಮಾಡಿ ಸಿಕ್ಕಿಬಿದ್ದಿದ್ದಾನೆ. ಹೊಸ ಗೆಳತಿಯೊಂದಿಗಿದ್ದ ಆತನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಆಸ್ಟ್ರೇಲಿಯಾದಲ್ಲಿ ನಡೆದಿರೋ ಘಟನೆ ಇದು. ಡಿಸೆಂಬರ್ 31ರಂದು ಆತ ಮನೆಯಿಂದ ಹೊರಬಂದಿದ್ದ. ಕೆಲವು ವಸ್ತುಗಳನ್ನು ಕೊಂಡು ತರುವುದಾಗಿ ಪತ್ನಿಗೆ ಹೇಳಿ ಹೋಗಿದ್ದ. ನಂತರ ವಾಪಸ್ ಬರಲೇ ಇಲ್ಲ.
ನಿನ್ನ ಪತಿಯನ್ನು ಅಪಹರಿಸಿದ್ದೇವೆ ಎಂದು ಅನಾಮಿಕ ಕರೆಯೊಂದು ಆತನ ಪತ್ನಿಗೆ ಬಂದಿತ್ತು. ಅವನನ್ನು ಬಿಟ್ಟು ಕಳಿಸಲು ಅಪಹರಣಕಾರ ಹಣವನ್ನೂ ಕೇಳಿದ್ದ. ಇದೇ ಸಮಯದಲ್ಲಿ ಪೊಲೀಸ್ ಠಾಣೆಗೂ ಅದೇ ರೀತಿಯ ಕರೆ ಬಂದಿತ್ತು, ಆ ವ್ಯಕ್ತಿಯ ಕಿಡ್ನಾಪ್ ಆಗಿರುವ ಬಗ್ಗೆ ಅನಾಮಧೇಯ ವ್ಯಕ್ತಿ ತಿಳಿಸಿದ್ದ. ಪೊಲೀಸರು ಈ ಘಟನೆಯ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ.
ಕಾಣೆಯಾಗಿದ್ದ ವ್ಯಕ್ತಿ ತನ್ನ ಅಪಹರಣವಾದಂತೆ ನಾಟಕವಾಡಿರೋದು ಬೆಳಕಿಗೆ ಬಂದಿದೆ. ಪತ್ನಿಯನ್ನು ಬಿಟ್ಟು ತನ್ನ ಪ್ರೇಯಸಿಯೊಂದಿಗಿರಲು ಆತ ಅಪಹರಣವಾದಂತೆ ನಾಟಕ ಮಾಡಿದ್ದ. ಹೊಸ ಗೆಳತಿಯೊಂದಿಗೆ ಇದ್ದಾಗಲೇ ಪೊಲೀಸರು ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆತನನ್ನು ಹಿಡಿಯಲು ಪೊಲೀಸರು ಸುಮಾರು ಇಪ್ಪತ್ತು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇನ್ನೊಂದೆಡೆ ಪತಿಯ ಮಾಸ್ಟರ್ ಪ್ಲಾನ್ ನೋಡಿ ಪತ್ನಿ ಆಘಾತಗೊಂಡಿದ್ದಾಳೆ.