ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಸರ್ಕಾರ ಕೂಡ ಇವಿಗಳಿಗೆ ಪ್ರೋತ್ಸಾಹ ನೀಡಲು ಅನೇಕ ಕಾರ್ಯತಂತ್ರಗಳನ್ನು ರೂಪಿಸ್ತಾ ಇದೆ. ದೇಶದಲ್ಲಿ ಈಗಾಗಲೇ ಹೈಡ್ರೋಜನ್ ಕಾರುಗಳನ್ನು ಸಹ ಪರಿಚಯಿಸಲಾಗಿದೆ.
ಮಾರುತಿ ಸುಜುಕಿ ಕೆಲ ಸಮಯದ ಹಿಂದೆ ಫ್ಲೆಕ್ಸ್-ಇಂಧನದಲ್ಲಿ ಚಾಲನೆ ಮಾಡಬಲ್ಲ ವ್ಯಾಗನಾರ್ ಕಾರನ್ನು ಪರಿಚಯಿಸಿತ್ತು. ಇದೀಗ ಬೈಕ್‌ಗಳ ಸರದಿ, ಹೀರೋ ಮೋಟೋಕಾರ್ಪ್ ಕೂಡ ಈ ತಂತ್ರಜ್ಞಾನದಲ್ಲಿ ತನ್ನ ಬೈಕ್ ಅನ್ನು ಪರಿಚಯಿಸಿದೆ.
ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ಕಂಪನಿ Hero Motorcorp 2023 ಆಟೋ ಎಕ್ಸ್‌ಪೋದಲ್ಲಿ ಫ್ಲೆಕ್ಸ್-ಫ್ಯೂಯಲ್ ತಂತ್ರಜ್ಞಾನದೊಂದಿಗೆ ತನ್ನ Glamour XTEC ಬೈಕ್ ಅನ್ನು ರಿವೀಲ್ ಮಾಡಿದೆ. ವಿಶೇಷವೆಂದರೆ ಈ ಬೈಕ್ ಇ20 ರಿಂದ ಇ85 ಮಿಶ್ರಣದಲ್ಲಿ ಓಡುವ ಸಾಮರ್ಥ್ಯ ಹೊಂದಿದೆ. ಹೀರೋ ಹೊರತುಪಡಿಸಿ, ಹಲವಾರು ಇತರ ಕಂಪನಿಗಳು ಆಟೋ ಎಕ್ಸ್‌ಪೋ 2023 ರಲ್ಲಿ ಫ್ಲೆಕ್ಸ್-ಇಂಧನ ವಾಹನಗಳನ್ನು ಪ್ರದರ್ಶಿಸಿವೆ. ಹೋಂಡಾದ XRE 300 ಅಡ್ವೆಂಚರ್, ಯಮಹಾದ FZ-FI, ಬಜಾಜ್‌ನ ಪಲ್ಸರ್ NS160 ಮತ್ತು ಸುಜುಕಿಯ Gixxer 250 ನಂತಹ ಬೈಕ್‌ಗಳು ಫ್ಲೆಕ್ಸ್ ಇಂಧನ ವೈಶಿಷ್ಟ್ಯವನ್ನು ಹೊಂದಿವೆ.
ಫ್ಲೆಕ್ಸ್ ಇಂಧನ ಬೈಕ್ ಎಂದರೇನು ?
ಫ್ಲೆಕ್ಸ್ ಫ್ಯುಯಲ್ ಬೈಕ್ ಗಳ ವಿಶೇಷತೆ ಏನೆಂದರೆ ಪೆಟ್ರೋಲ್ ಮತ್ತು ಎಥೆನಾಲ್ ಮಿಶ್ರಣದಿಂದ ಇದು ಚಲಿಸುತ್ತದೆ. 20 ಪ್ರತಿಶತ ಎಥೆನಾಲ್ ಮತ್ತು 80 ಪ್ರತಿಶತ ಪೆಟ್ರೋಲ್ (e20) ಅಥವಾ 20 ಪ್ರತಿಶತ ಪೆಟ್ರೋಲ್ ಮತ್ತು 80 ಪ್ರತಿಶತ ಎಥೆನಾಲ್ (e80) ಮಾದರಿಯಲ್ಲಿ ಇವು ಓಡುತ್ತವೆ. ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಮತ್ತು ಮಾಲಿನ್ಯದ ಕಾರಣ, ಅನೇಕ ದೇಶಗಳಲ್ಲಿ ಫ್ಲೆಕ್ಸ್-ಇಂಧನವನ್ನು ಕಡ್ಡಾಯಗೊಳಿಸಲಾಗಿದೆ.
ಭಾರತ ಸರ್ಕಾರವು 2025-26ರ ವೇಳೆಗೆ e20 ಗುರಿಯನ್ನು ಸಾಧಿಸುವ ಯೋಜನೆ ಹಾಕಿಕೊಂಡಿದೆ. ಕಂಪನಿಯ ಪ್ರಕಾರ ಬೈಕಿನ ಹೊಸ ಫ್ಲೆಕ್ಸ್ ಎಂಜಿನ್ 10.7 bhp ಪವರ್ ಮತ್ತು 10.6 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಸ್ಟ್ಯಾಂಡರ್ಡ್ ಮಾದರಿಯಂತೆ 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಭಾರತದಲ್ಲಿನ ಹೀರೋ ಗ್ಲಾಮರ್ ಎಕ್ಸ್‌ಟೆಕ್ ಬೆಲೆಯು ಬೇಸ್ ಎಂಜಿನ್‌ಗೆ ಸುಮಾರು 86,000 ರೂಪಾಯಿಯಿಂದ ಪ್ರಾರಂಭವಾಗುತ್ತದೆ.