ಜನವರಿ 15ರ ಭಾನುವಾರದಂದು ನೇಪಾಳದಲ್ಲಿ ವಿಮಾನ ಪತನಗೊಂಡ ಪರಿಣಾಮ ಅದರಲ್ಲಿದ್ದ ಎಲ್ಲ 72 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರ ಪೈಕಿ ಐವರು ಭಾರತೀಯರೂ ಇದ್ದು, ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಯುವಕನೊಬ್ಬನ ಮೊಬೈಲ್ ನಲ್ಲಿ ವಿಮಾನ ಪತನದ ಕೊನೆ ಕ್ಷಣಗಳು ಸೆರೆಯಾಗಿವೆ.
ಆದರೆ ಕಾಕಾತಾಳಿಯವೆಂಬಂತೆ 14 ವರ್ಷಗಳ ಹಿಂದೆ ಇದೇ ದಿನ ಅಂದರೆ 2009ರ ಜನವರಿ 15ರಂದು ಇದೇ ರೀತಿ ವಿಮಾನವೊಂದು ಅಪಘಾತಕ್ಕೀಡಾಗಿತ್ತು. ಆದರೆ ಅಚ್ಚರಿಯ ಸಂಗತಿ ಎಂದರೆ ಅದರಲ್ಲಿದ್ದ 155 ಮಂದಿ ಪ್ರಯಾಣಿಕರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದರು. ಇದು ವಿಮಾನಯಾನದ ಇತಿಹಾಸದಲ್ಲಿಯೇ ಅತ್ಯಂತ ಅದೃಷ್ಟದ ಘಟನೆ ಎಂದೇ ಬಣ್ಣಿಸಲಾಗುತ್ತದೆ.
2009ರ ಜನವರಿ 15ರಂದು ನ್ಯೂಯಾರ್ಕ್ ನಗರದ ಲ ಗಾರ್ಡಿಯಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಯುಎಸ್ ಏರ್ವೇಸ್ ಗೆ ಸೇರಿದ ವಿಮಾನ ಹಾರಾಟದಲ್ಲಿರುವಾಗಲೇ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಇಂಜಿನ್ ಸ್ಥಗಿತಗೊಂಡಿತ್ತು. ಆದರೆ ಧೃತಿಗೆಡದ ಪೈಲೆಟ್ ವಿಮಾನವನ್ನು ಹಡ್ಸನ್ ನದಿಯಲ್ಲಿ ಇಳಿಸಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ ಸ್ಥಳೀಯರು ಪ್ರಯಾಣಿಕರನ್ನು ತಮ್ಮ ಬೋಟ್ ಗಳಲ್ಲಿ ದಡಕ್ಕೆ ಸಾಗಿಸಿದ್ದರು. ಈ ಘಟನೆಯನ್ನು ‘ಮಿರಾಕಲ್ ಆನ್ ಹಡ್ಸನ್’ಎಂದೇ ಈಗಲೂ ಬಣ್ಣಿಸಲಾಗುತ್ತದೆ.