ಉತ್ತರಾಖಂಡದ ಜೋಶಿ ಮಠದಲ್ಲಿ ವ್ಯಾಪಕ ಭೂ ಕುಸಿತವಾಗುತ್ತಿದ್ದು, ಅಲ್ಲಿಂದ 22 ಕಿ.ಮೀ ದೂರದಲ್ಲಿರುವ ಬದ್ರಿನಾಥ ದೇಗುಲಕ್ಕೂ ಆತಂಕ ಎದುರಾಗಿದೆ. ಅಲ್ಲದೆ ಶತಮಾನಗಳ ಹಿಂದೆ ಬದ್ರಿನಾಥನ ಬಗ್ಗೆ ‘ಸನಾತನ ಸಂಹಿತೆ’ ಪುರಾಣದಲ್ಲಿ ಉಲ್ಲೇಖವಾಗಿರುವ ಭವಿಷ್ಯ ನಿಜವಾಗುತ್ತಾ ಎಂಬ ಆತಂಕ ಭಕ್ತರನ್ನು ಕಾಡುತ್ತಿದೆ.
ಈ ಪುರಾಣದಲ್ಲಿ ಜೋಶಿ ಮಠದಲ್ಲಿರುವ ವಿಷ್ಣುವಿನ ಅವತಾರದಲ್ಲಿ ಒಂದಾದ ನರಸಿಂಹ ವಿಗ್ರಹದ ತೋಳು ಮುರಿದು ಬಿದ್ದ ಬಳಿಕ ವಿಷ್ಣು ಪ್ರಯಾಗದ ಬಳಿ ಇರುವ ಜಯ – ವಿಜಯ ಪರ್ವತಗಳು ಕುಸಿದು ಬಿದ್ದು ದೇಗುಲ ಪ್ರವೇಶ ಅಸಾಧ್ಯವಾಗುತ್ತದೆ ಎಂದು ಉಲ್ಲೇಖವಾಗಿದೆ ಎನ್ನಲಾಗಿದ್ದು, ಈಗ ನಡೆಯುತ್ತಿರುವ ಬೆಳವಣಿಗೆಗಳು ಇದಕ್ಕೆ ಪೂರಕವಾಗಿವೆ.
ನರಸಿಂಹದೇವರ ಅರ್ಚಕ ಸಂಜಯ್ ಪ್ರಸಾದ್ ದಿಮ್ರಿ ಅವರು, ಜೋಶಿ ಮಠದಲ್ಲಿರುವ ನರಸಿಂಹ ವಿಗ್ರಹದ ಎಡ ತೋಳು ದಿನೇ ದಿನೇ ತೆಳುವಾಗುತ್ತಾ ಸಾಗುತ್ತಿದೆ. ಪ್ರತಿದಿನ ಸ್ವಾಮಿಗೆ ಜಲಾಭಿಷೇಕ ಮಾಡುವಾಗ ನಾವು ಇದನ್ನು ಗಮನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ತೋಳು ಬಿದ್ದು ಹೋದರೆ ‘ಸನಾತನ ಸಂಹಿತೆ’ ಪುರಾಣದಲ್ಲಿ ಉಲ್ಲೇಖವಾದಂತೆ ಬದ್ರಿ ನಾರಾಯಣನ ಬಾಗಿಲು ಬಂದ್ ಆಗಲಿದೆಯಾ ಎಂಬ ಆತಂಕ ಎದುರಾಗಿದೆ.