ನವದೆಹಲಿಯಲ್ಲಿ ಈಚೆಗೆ ಲೈಂಗಿಕ ಅಲ್ಪಸಂಖ್ಯಾತರ ಸಮಾವೇಶ ನಡೆಯಿತು. ಇದರಲ್ಲಿ 10 ರಿಂದ 12 ಸಾವಿರ ಜನರು ಭಾಗವಹಿಸಿದ್ದರು. ಅದರಲ್ಲಿ ಎಲ್ಲರ ಗಮನ ಸೆಳೆದದ್ದು 24 ವರ್ಷದ ಯಶ್ ಅವರ ತಾಯಿ ಮೀನಾಕ್ಷಿ.
ಮಾಧ್ಯಮವೊಂದರ ಸಂವಾದದಲ್ಲಿ ಅವರು ಆಡಿದ ಮಾತುಗಳು ಎಲ್ಲರ ಕಣ್ಣು ತೆರೆಸುವಂತಿದೆ. “ಈ ಮೆರವಣಿಗೆಯಲ್ಲಿ ನಾನು ಭಾಗವಹಿಸಿದ್ದೆ. ಲೈಂಗಿಕ ಅಲ್ಪಸಂಖ್ಯಾತರ ನೋವನ್ನು ನಾನು ಕಣ್ಣಾರೆ ನೋಡಿದ್ದೇನೆ. ಅವರು ಹೊರನೋಟಕ್ಕೆ ಸಂತೋಷದಿಂದ ಕಾಣುತ್ತಾರೆ ಆದರೆ ಅವರ ಕುಟುಂಬದ ಬೆಂಬಲವಿಲ್ಲದ ಕಾರಣ ಅವರು ಬಳಲುತ್ತಿದ್ದಾರೆ” ಎಂದು ಮೀನಾಕ್ಷಿ ಹೇಳಿದರು.
“ಈ ಸಮುದಾಯದವರಿಗೆ ಅವರ ಹೆತ್ತವರ ಪ್ರೀತಿ ಮತ್ತು ಬೆಂಬಲ ಬೇಕು. ನೀವು ಅದನ್ನು ಒದಗಿಸದಿದ್ದರೆ, ಅವರು ತಮ್ಮ ಮನೆಗಳನ್ನು ತೊರೆಯಬಹುದು. ನಾವು ನಮ್ಮ ಮಕ್ಕಳನ್ನು ಮನೆ ಬಿಟ್ಟು ಹೋಗುವಂತೆ ಹೇಳಬಾರದು. ಅವರು ಎಲ್ಲಿಗೆ ಹೋಗುತ್ತಾರೆ ?” ಎಂದು ಪ್ರಶ್ನಿಸಿರುವ ಮೀನಾಕ್ಷಿಯವರು ಸಮಾಜ ಕೂಡ ಇಂಥವರನ್ನು ಬದುಕಲು ಬಿಡಬೇಕು. ಅವರು ಕೂಡ ನಮ್ಮಂತೆಯೇ ಮನುಷ್ಯರು ಎನ್ನುವುದನ್ನು ಅರಿಯಬೇಕು” ಎಂದಿದ್ದಾರೆ.
ಎರಡೂವರೆ ವರ್ಷಗಳ ಹಿಂದೆ ನನ್ನ ಮಗ ತನ್ನ ಲೈಂಗಿಕತೆಯ ಬಗ್ಗೆ ಹೇಳಿದಾಗ ನಮಗೆ ಶಾಕ್ ಆಯಿತು. ಆಘಾತಕ್ಕೆ ಒಳಗಾದೆವು. ಯಶ್ ನನ್ನ ಹಿರಿಯ ಮಗ. ಕೊನೆಗೆ ತಿಳಿಯಿತು. ಅದು ಅವನ ತಪ್ಪಲ್ಲ, ಅವನು ಯಾಕೆ ಹಾಗೆ ಎಂದು ಯೋಚಿಸುವ ಬದಲು ಅವನಿಗೆ ಸಮಾಧಾನ ಮಾಡಿದೆ. ಅವನಿಗೆ ಸಂಪೂರ್ಣ ಬೆಂಬಲ ಕೊಡುತ್ತಿದ್ದೇವೆ. ನಿನ್ನ ಜೊತೆ ನಾವಿದ್ದೇವೆ ಎಂದು ಹೇಳಿದ್ದು, ಅದು ಅವನಿಗೆ ಖುಷಿ ತಂದಿದೆ” ಎಂದರು.