ಬೆಂಗಳೂರು: 3,673 ಪೌರ ಕಾರ್ಮಿಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಿಬಿಎಂಪಿಯ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವುದಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ನಾಳೆಯಿಂದ ಜನವರಿ 30 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಬಿಬಿಎಂಪಿ ವೆಬ್ಸೈಟ್ ನಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಪಾಲಿಕೆಯ ಆಯಾ ವಾರ್ಡ್ ನ ಸಹಾಯಕ ಕಾರ್ಯಪಾಲಕ ಇಂಜಿನಿಯರ್(ಘನ ತ್ಯಾಜ್ಯ) ನಿರ್ವಹಣೆ ಅವರ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಜನವರಿ 16ರಂದು ಬೆಳಗ್ಗೆ 10 ಗಂಟೆಯಿಂದ ಅರ್ಜಿ ವಿತರಿಸಲಿದ್ದು, ಜನವರಿ 30ರ ಸಂಜೆ 5 ಗಂಟೆಯೊಳಗೆ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಲು ತಿಳಿಸಲಾಗಿದೆ.
3673 ಹುದ್ದೆಗಳಲ್ಲಿ 3243 ಹುದ್ದೆಗಳು ಸಾಮಾನ್ಯ ಹುದ್ದೆಗಳಾಗಿವೆ. 430 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವ ವಿಶೇಷ ನೇಮಕಾತಿ ಆಗಿರುವುದರಿಂದ ನೇಮಕಾತಿ ಷರತ್ತುಗಳನ್ನು ಒಂದು ಬಾರಿಗೆ ಸಡಿಲಗೊಳಿಸಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ 10 ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಪೌರಕಾರ್ಮಿಕರಿಗೆ 17,000 ರೂ. ನಿಂದ 28,950 ರೂ.ವರೆಗೆ ವೇತನ ನಿಗದಿಪಡಿಸಲಾಗಿದೆ. ಕನಿಷ್ಠ ಎರಡು ವರ್ಷ ಗುತ್ತಿಗೆ ಆಧಾರದಡಿ ಕಾರ್ಯ ನಿರ್ವಹಿಸಿದ ಪೌರಕಾರ್ಮಿಕರು ಕಾಯಂಗೊಳಿಸುವ ನೇಮಕಾತಿ ವೇಳೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕಡ್ಡಾಯವಾಗಿ ನೇರ ವೇತನ ಪಾವತಿ ಅಡಿ ಸಂಬಳ ಪಡೆದ ದಾಖಲಾತಿ, ಪಿಎಫ್, ಇಎಸ್ಐ ದಾಖಲಾತಿ, ಏಜೆನ್ಸಿ ಮೂಲಕ ವೇತನ ಪಡೆದ ದಾಖಲಾತಿಯನ್ನು ಸಲ್ಲಿಸಬೇಕು.
ಹೆಚ್ಚಿನ ಅವಧಿ ಸೇವೆ ಸಲ್ಲಿಸಿದ ಪೌರಕಾರ್ಮಿಕರನ್ನು ಪರಿಗಣಿಸಬೇಕು. ಪೌರಕಾರ್ಮಿಕರ ಕಾಯಂಗೆ ಯಾವುದೇ ಶೈಕ್ಷಣಿಕ ಅರ್ಹತೆ ನಿಗದಿಪಡಿಸಿಲ್ಲ. ಕನ್ನಡ ಭಾಷೆ ಮಾತನಾಡುವುದಕ್ಕೆ ತಿಳಿದಿರಬೇಕು. ದೈಹಿಕ ಸದೃಢತೆ ಹೊಂದಿರಬೇಕು. ಸರ್ಕಾರಿ ಆಸ್ಪತ್ರೆಯಿಂದ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಹೇಳಲಾಗಿದೆ.