ನವದೆಹಲಿ: ಲಕ್ಷದ್ವೀಪ ಸಂಸದ ಪಿ.ಪಿ. ಮೊಹಮ್ಮದ್ ಫೈಝಲ್ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ. ಪ್ರಕರಣವೊಂದರಲ್ಲಿ ಅಪರಾಧಿ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಲಕ್ಷದ್ವೀಪ್ ಸಂಸದ ಪಿ.ಪಿ. ಮೊಹಮ್ಮದ್ ಫೈಝಲ್ ಅವರನ್ನು ಘೋಷಿಸಿದ ನಂತರ ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ.
2009 ರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕವರಟ್ಟಿ ಸೆಷನ್ಸ್ ನ್ಯಾಯಾಲಯವು ಸಂಸದ ಹಾಗೂ ಇತರ ಮೂವರಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಲೋಕಸಭೆಯ ಸೆಕ್ರೆಟರಿಯೇಟ್ ಅವರನ್ನು ಅನರ್ಹಗೊಳಿಸುವ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ.
ಲಕ್ಷದ್ವೀಪದ ಕವರಟ್ಟಿ ಸೆಷನ್ಸ್ ನ್ಯಾಯಾಲಯದ ಶಿಕ್ಷೆಯ ಪರಿಣಾಮವಾಗಿ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯ ಮೊಹಮ್ಮದ್ ಫೈಝಲ್ ಅವರು ಲೋಕಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ ಎಂದು ಲೋಕಸಭೆಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.