ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ ಭಾರತ ಸಂವಿಧಾನದ ಪೀಠಿಕೆಯ ಫಲಕ ಅಳವಡಿಸಲು ಕಾಲೇಜು ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿರುವಂತೆ ನಮ್ಮ ಸಂವಿಧಾನಕ್ಕೆ ಪೀಠಿಕೆ ಆತ್ಮವಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ದೇಶದ ಪ್ರತಿ ಪ್ರಜೆ ಭಾರತದ ಸಂವಿಧಾನದ ಆಶಯಗಳನ್ನು ಅರಿಯುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಫಲಕ ಅಳವಡಿಸುವಂತೆ ಸೂಚಿಸಲಾಗಿದೆ.
ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಕಾನೂನು ಇಲಾಖೆ ಕೇಂದ್ರದಿಂದ ಸಂವಿಧಾನ ಪೀಠಿಕೆ ಖರೀದಿಸಿ ಕಾಲೇಜಿನಲ್ಲಿ ಫಲಕ ಪ್ರಕಟಿಸಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ. ಸಂವಿಧಾನದ ಅಮೃತ ಮಹೋತ್ಸವದ ಅಂಗವಾಗಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಚಿಕ್ಕಟ್ಟಿ ಕೃಷಿ ರೈತ ಉತ್ಪಾದಕರ ಸಂಘದ ವತಿಯಿಂದ ನೀಡಿದ ಪ್ರಸ್ತಾವನೆಯ ಮೇರೆಗೆ ಈ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಲಾಗಿದೆ.