ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಚಾಮುಂಡೇಶ್ವರಿಯಲ್ಲಿ ಪರಾಭವಗೊಂಡಿದ್ದರೆ ಬಾದಾಮಿಯಲ್ಲಿ ಜಯ ಸಾಧಿಸಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರವನ್ನು ತ್ಯಜಿಸಲು ಮುಂದಾಗಿರುವ ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಇದರ ಮಧ್ಯೆ ಮಳವಳ್ಳಿಯ ಆದಿನಾಡು ಚಿಕ್ಕಮ್ಮ ದೇವಿ ನೀಡಿರುವ ಸಂದೇಶವೊಂದು ಕುತೂಹಲ ಕೆರಳಿಸಿದೆ.
ಕಳೆದ ವಾರ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಳವಳ್ಳಿ ಆದಿನಾಡು ಚಿಕ್ಕಮ್ಮ ದೇವಿ ದೇಗುಲಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಎರಡು ಕಡೆ ಬಾಹು ಚಾಚಲೇಬೇಕು ಎಂಬ ಸಂದೇಶ ಬಂದಿದೆ ಎನ್ನಲಾಗಿದೆ. ಇದರರ್ಥ ಒಂದೇ ಕಡೆ ಸ್ಪರ್ಧಿಸಿದರೆ ಸಂಕಷ್ಟ ಎಂದು ಹೇಳಲಾಗುತ್ತಿದೆ.
ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿಯೂ ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರಾ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಒಂದೊಮ್ಮೆ ಈ ರೀತಿಯ ತೀರ್ಮಾನ ಕೈಗೊಂಡರೆ ಯತೀಂದ್ರ ಅವರು ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕಿಳಿಯಬಹುದಾಗಿದೆ.