8 ನೇ ತರಗತಿಯ ವಿದ್ಯಾರ್ಥಿಯು 6 ನೇ ತರಗತಿಯ ಬಾಲಕಿಯ ಮನೆಗೆ ಬಲವಂತವಾಗಿ ನುಗ್ಗಿ, ಚಾಕುವಿನಿಂದ ಬೆದರಿಸಿ ಅವಳ ಹಣೆಯ ಮೇಲೆ ಸಿಂಧೂರ ಹಚ್ಚಿರೋ ಪ್ರಕರಣ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ವರದಿಯಾಗಿದೆ. ಈ ವೇಳೆ ಹುಡುಗಿ ಭಯಭೀತಳಾಗಿ ಕಿರುಚಾಡಿದ್ದಾಳೆ. ಆದರೆ ಇತರರು ಅಲ್ಲಿಗೆ ತಲುಪುವ ಮೊದಲೇ ಹುಡುಗ ತನ್ನ ಸ್ನೇಹಿತನೊಂದಿಗೆ ತಪ್ಪಿಸಿಕೊಂಡಿದ್ದ. ಬಾಲಕಿಯ ತಂದೆ ದೂರು ನೀಡಿದ ನಂತರ 16 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಕಸ ಗುಡಿಸುತ್ತಿದ್ದಾಗ ಹುಡುಗರು ಆಕೆಯ ಮನೆಯ ಕಾಂಪೌಂಡ್ ಹತ್ತಿ ಬಂದಿದ್ದರು. ಅವರಲ್ಲಿ ಒಬ್ಬ ಹುಡುಗಿಯ ಕುತ್ತಿಗೆಯ ಮೇಲೆ ಚಾಕುವನ್ನು ಇಟ್ಟು ಆಕೆಯ ಹಣೆಯ ಮೇಲೆ ಸಿಂಧೂರವನ್ನು ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಡ್ರೈವರ್ ಆಗಿರುವ ಹುಡುಗಿಯ ತಂದೆ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ ಆಕೆ ಘಟನೆಯ ಬಗ್ಗೆ ವಿವರಿಸಿದ್ದಾಳೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ, 2012 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಹುಡುಗನನ್ನು ಬಂಧಿಸಲಾಗಿದೆ.
ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದ್ದು, ಬಾಲಾಪರಾಧಿಗೃಹದಲ್ಲಿ ಇರಿಸಲಾಗಿದೆ. ಈ ಕೃತ್ಯಕ್ಕೆ ಹುಡುಗ ಪಶ್ಚಾತ್ತಾಪ ಪಡಲಿಲ್ಲ ಮತ್ತು ತಾನು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಹಾಗೂ ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿರೋದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹುಡುಗ ಕಳೆದ ಮೂರು ತಿಂಗಳಿನಿಂದ ಹುಡುಗಿಯನ್ನು ಹಿಂಬಾಲಿಸಿ ಪ್ರಪೋಸ್ ಮಾಡುವ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಈ ವಿಷಯ ತಿಳಿದ ಬಾಲಕಿಯ ಪೋಷಕರು ಆಕೆಯನ್ನು ಬೇರೆ ಶಾಲೆಗೆ ಸೇರಿಸಿದರೂ ಪೊಲೀಸರಿಗೆ ದೂರು ನೀಡಿರಲಿಲ್ಲ.