ಬಹುತೇಕ ಎಲ್ಲಾ ಕಡೆಗಳಲ್ಲಿ ಈಗ ಮೈನಡುಗಿಸುವಂಥ ಚಳಿ. ಈ ಸಮಯದಲ್ಲಿ ಬಿಸಿ ಬಿಸಿ ನೀರು ಸ್ನಾನ ಮಾಡುವುದಂದ್ರೆ ಎಲ್ಲರಿಗೂ ಖುಷಿ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು. ಸಾಮಾನ್ಯಕ್ಕಿಂತಲೂ ಹೆಚ್ಚು ಬಿಸಿಯಾಗಿರುವ ನೀರಿನಲ್ಲಿ ಸ್ನಾನ ಮಾಡುವುದರಿಂದ ಅನೇಕ ಸಮಸ್ಯೆಗಳಾಗುತ್ತವೆ. ಚರ್ಮ ಮತ್ತು ಕೂದಲಿಗೆ ತೊಂದರೆಯಾಗುತ್ತದೆ. ಅತಿಯಾದ ಬಿಸಿನೀರು ಸ್ನಾನದಿಂದ ಇನ್ನೂ ಏನೇನು ಅನಾನುಕೂಲಗಳಿವೆ ಅನ್ನೋದನ್ನು ನೋಡೋಣ.
ಕಣ್ಣುಗಳಿಗೆ ತೊಂದರೆ: ಅತಿಯಾದ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಕಣ್ಣಿನಲ್ಲಿರುವ ತೇವಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಣ್ಣಿನಲ್ಲಿ ತುರಿಕೆ ಶುರುವಾಗಬಹುದು. ಕಣ್ಣು ಡ್ರೈ ಆಗುವ ಸಮಸ್ಯೆಯಿದ್ದರೆ ಬಿಸಿ ನೀರಿನ ಶವರ್‌ಗೆ ಮೈಯೊಡ್ಡಬೇಡಿ. ತಣ್ಣೀರಿನಿಂದ ಸ್ನಾನ ಮಾಡುವುದು ತುಂಬಾ ಪ್ರಯೋಜನಕಾರಿ.
ಫಲವತ್ತತೆ (ಫರ್ಟಿಲಿಟಿ): ಅತಿಯಾದ ಬಿಸಿನೀರಿನ ಸ್ನಾನ ಮಾಡುವುದು ಅಪಾಯಕಾರಿ ಅನ್ನೋ ವಿಚಾರ ಅಚ್ಚರಿ ಮೂಡಿಸಬಹುದು. ಆದರೆ ನಿರಂತರವಾಗಿ ಬಿಸಿನೀರಿನ ಸ್ನಾನ ಮಾಡುವುದು ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ನೀವು ಗರ್ಭಿಣಿಯಾಗಲು ಬಯಸಿದರೆ, ಅತಿಯಾದ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಇನ್ನೊಂದೆಡೆ ಪ್ರತಿದಿನ ಬಿಸಿನೀರಿನ ಸ್ನಾನ ಮಾಡುವುದರಿಂದ ಪುರುಷರ ವೀರ್ಯದ ಮೇಲೆ ಪರಿಣಾಮ ಬೀರುತ್ತದೆ.
ಕೂದಲು ಮತ್ತು ಚರ್ಮ: ಬಿಸಿನೀರು ಕೂದಲಿಗೆ ಅಪಾಯಕಾರಿ. ಬಿಸಿ ನೀರು ಕೂದಲಿನಲ್ಲಿರುವ ಕೆರಟಿನ್ ಕೋಶಗಳನ್ನು ದುರ್ಬಲಗೊಳಿಸುತ್ತದೆ. ಈ ಕಾರಣದಿಂದಾಗಿ ಕೂದಲು ತೆಳುವಾಗಲು ಪ್ರಾರಂಭಿಸುತ್ತದೆ. ಜೊತೆಗೆ ಕೂದಲು ಶುಷ್ಕವಾಗುತ್ತದೆ. ಹಾಗಾಗಿ ಅತಿಯಾದ ಬಿಸಿ ನೀರಿನಿಂದ ತಲೆ ಸ್ನಾನ ಮಾಡಬಾರದು.
ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು: ಬಿಸಿನೀರಿನ ಸ್ನಾನ ಮಾಡುವುದರಿಂದ ಚರ್ಮ ಒಣಗುತ್ತದೆ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಅದಕ್ಕಾಗಿಯೇ ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಹೂಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಅತ್ಯಂತ ಸೂಕ್ತ.