ಚೀನಾ ಮತ್ತೊಮ್ಮೆ ಕೋವಿಡ್ ಅಲೆಯನ್ನು ಎದುರಿಸುತ್ತಿದೆ. ಆದರೆ ಅಧಿಕೃತ ಮಾಹಿತಿ ನೀಡದ ಕಾರಣ ಈ ಅಲೆ ಎಷ್ಟು ಗಂಭೀರವಾಗಿದೆ ಅನ್ನೋದು ಸ್ಪಷ್ಟವಾಗುತ್ತಿಲ್ಲ. ಮೂಲಗಳ ಪ್ರಕಾರ ಕೋವಿಡ್‌ನಿಂದಾಗಿ ಚೀನಾದಲ್ಲಿ ತೀವ್ರ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳು ಮತ್ತು ಶವಾಗಾರಗಳು ತುಂಬಿ ತುಳುಕುತ್ತಿವೆ. ಡಿಸೆಂಬರ್ ಆರಂಭದಲ್ಲಿ ಚೀನಾದಲ್ಲಿ ‘ಶೂನ್ಯ ಕೋವಿಡ್ ನೀತಿ’ ಅಡಿಯಲ್ಲಿ ನಿರ್ಬಂಧಗಳನ್ನು ತೆಗೆದುಹಾಕಿದ್ದರಿಂದ ಮತ್ತೆ ಸೋಂಕು ತೀವ್ರಗೊಂಡಿದೆ ಅಂತ ಹೇಳಲಾಗ್ತಿದೆ. ಆದರೆ ನಿರ್ಬಂಧಗಳನ್ನು ಸಡಿಲಿಸುವ ಮುನ್ನವೇ ಚೀನಾದಲ್ಲಿ ಪ್ರಕರಣಗಳು ಹೆಚ್ಚಾಗಿದ್ದವು.
ಸೋಂಕು ಹೆಚ್ಚಳಕ್ಕೆ ಕಾರಣವೇನು?
ವ್ಯಾಕ್ಸಿನೇಷನ್ ನಂತರ ದೀರ್ಘಕಾಲದವರೆಗೆ ‘ಶೂನ್ಯ ಕೋವಿಡ್ ನೀತಿ’ಯನ್ನು ಮುಂದುವರಿಸಿದ್ದರಿಂದ ಸೋಂಕು ಹೆಚ್ಚಿದೆ ಅನ್ನೋದು ತಜ್ಞರ ಲೆಕ್ಕಾಚಾರ. ಮೊದಲ ಬೂಸ್ಟರ್ ಡೋಸ್‌ನ ಎಂಟು ತಿಂಗಳ ನಂತರ ಚೀನೀಯರಲ್ಲಿ ಸೋಂಕು ನಿರೋಧಕ ಶಕ್ತಿಯೇ ಇಲ್ಲದಂತಾಗಿದೆ ಅನ್ನೋದು ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ಚೀನಾದಲ್ಲಿ ಫೆಬ್ರವರಿ 2022ರಲ್ಲಿ ವ್ಯಾಕ್ಸಿನೇಷನ್ ಬಹುತೇಕ ಪೂರ್ಣಗೊಂಡಿತು. ನ್ಯೂಜಿಲೆಂಡ್ ಕೂಡ ಇದೇ ತಂತ್ರವನ್ನು ಅಳವಡಿಸಿಕೊಂಡಿತ್ತು. ಆದರೆ ಲಸಿಕೆ ಅಭಿಯಾನವನ್ನು ಪೂರ್ಣಗೊಳಿಸಿದ ನಂತರ ನ್ಯೂಜಿಲೆಂಡ್ ಕೋವಿಡ್ ನಿಯಂತ್ರಣ ನೀತಿಯನ್ನು ಕೊನೆಗೊಳಿಸಿತು. ನಿರೀಕ್ಷೆಯಂತೆ ನಿರ್ಬಂಧಗಳನ್ನು ತೆಗೆದುಹಾಕಿದ ಬಳಿಕ ಪ್ರಕರಣಗಳಲ್ಲಿ ತೀವ್ರ ಹೆಚ್ಚಳವಾದರೂ ಸಾವಿನ ಪ್ರಮಾಣ ಅನೇಕ ದೇಶಗಳಿಗಿಂತ ಕಡಿಮೆಯಾಗಿದೆ.
ಪ್ರಸ್ತುತ ಅಲೆ ಪ್ರಾರಂಭವಾದ ಸಮಯದಲ್ಲಿ ಚೀನಾದ ಬಹುತೇಕರಲ್ಲಿ ‘ಹೈಬ್ರಿಡ್ ಇಮ್ಯುನಿಟಿ’ ಮಟ್ಟ ಕುಸಿದಿತ್ತು. ಅಲ್ಲಿನ ವೃದ್ಧರಿಗೆ ವ್ಯಾಕ್ಸಿನೇಷನ್ ಪ್ರಮಾಣ ಕೂಡ ಕಡಿಮೆಯಿತ್ತು. ಇದೇ ಕಾರಣಕ್ಕೆ ಸಾವು ನೋವು ಹೆಚ್ಚುತ್ತಲೇ ಇದೆ. ನಿಯಂತ್ರಣ ಹೇಗೆ? ಚೀನಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರೋ ಹೊಸ ಕೊರೊನಾ ಅಲೆ ಮತ್ತಷ್ಟು ತೀವ್ರಗೊಂಡು ನಂತರ ದುರ್ಬಲವಾಗುವ ಸಾಧ್ಯತೆ ಇದೆ. ಆದರೆ ಚೀನಾ ಅಂಕಿ-ಸಂಖ್ಯೆಗಳನ್ನು ಗುಪ್ತವಾಗಿಟ್ಟಿರುವುದರಿಂದ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. ಡಿಸೆಂಬರ್ 1 ರಿಂದ 33.2 ಮಿಲಿಯನ್ ಸೋಂಕಿನ ಪ್ರಕರಣಗಳು ಮತ್ತು 1,92,400 ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಲಾಗಿದೆ. ಚೀನಾದಿಂದ ಸೋರಿಕೆಯಾದ ಮಾಹಿತಿಯ ಪ್ರಕಾರ ಡಿಸೆಂಬರ್ ತಿಂಗಳಿನ ಮೊದಲ 20 ದಿನಗಳಲ್ಲಿ ಸುಮಾರು 250 ಮಿಲಿಯನ್ ಜನರು ಸೋಂಕಿಗೆ ಒಳಗಾಗಿದ್ದಾರಂತೆ. ಮುಂಬರುವ ವಾರಗಳಲ್ಲಿ ಸೋಂಕು ಇಳಿಮುಖವಾಗಬಹುದು.
ಪ್ರಪಂಚದ ಉಳಿದ ಭಾಗಗಳಿಗೆ ಏಕೆ ಆತಂಕ?
ಕೊರೊನಾದ ಈ ಅಲೆಯ ಸಂದರ್ಭದಲ್ಲಿ ಚೀನಾಕ್ಕಿಂತ ಉಳಿದ ದೇಶಗಳಲ್ಲಿನ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿತ್ತು. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ & ಕಂಟ್ರೋಲ್ ಪ್ರಕಾರ, ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳವು ಯುರೋಪ್‌ನಲ್ಲಿ ಯಾವುದೇ ವ್ಯತ್ಯಾಸ ಉಂಟುಮಾಡುವುದಿಲ್ಲ. ಚೀನಾದಲ್ಲಿ ಕಾಣಿಸಿಕೊಂಡಿರೋ ರೂಪಾಂತರಗಳು ಕಳೆದ ಬೇಸಿಗೆಯಲ್ಲಿ ಯುರೋಪ್‌ನಲ್ಲಿ ಉತ್ತುಂಗಕ್ಕೇರಿ ನಂತರ ಕ್ಷೀಣಿಸಿವೆ. ಹಾಗಾಗಿ ಯುರೋಪಿನಲ್ಲಿ ಚೀನಾದ ಮೂಲಕ ದೊಡ್ಡ ಪ್ರಮಾಣದ ಸೋಂಕು ಹರಡುವ ಸಾಧ್ಯತೆಯಿಲ್ಲ. ಈ ರೀತಿಯಾಗಿ ಇತರ ಖಂಡಗಳ ದೇಶಗಳು ಚೀನಾದ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಯೂ ಕಡಿಮೆಯಾಗಿದೆ.