ಸುರತ್ಕಲ್- ಇಲ್ಲೊಂದು ಹೈಟೆಕ್ ಬಸ್ ನಿಲ್ದಾಣ ಇದೆ. ಈ ನಿಲ್ದಾಣ ಎಷ್ಟು ಸುಸಜ್ಜಿತವಾಗಿದೆ ಅಂದರೆ ನೀವು ಊಹಿಸೋದಕ್ಕೂ ಸಾಧ್ಯವಿಲ್ಲ. ಅಂತಹ ಈ ನಿಲ್ದಾಣ ಇರೋದು ಸುರತ್ಕಲ್ ನಲ್ಲಿ. ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಸುರತ್ಕಲ್‌ನ ಗೋವಿಂದ ದಾಸ್ ಬಸ್ ನಿಲ್ದಾಣ ಇದಾಗಿದೆ. ಇಲ್ಲಿ ಎಲ್ಲಾ ತರಹದ ವ್ಯವಸ್ಥೆಯೂ ಇದೆ. ಇನ್ನು ಮುಡಾದಿಂದ ಈ ಹೈಟೆಕ್ ನಿಲ್ದಾಣ ನಿರ್ಮಿಸಲಾಗಿತ್ತು. ಇದು, 200 ಚದರಡಿ ವಿಸ್ತೀರ್ಣವಿದೆ. ಇದಕ್ಕಾಗಿ ಸುಮಾರು 30 ಲಕ್ಷ ಖರ್ಚು ಮಾಡಲಾಗಿದೆ.
ಹೌದು, ಸಾಮಾನ್ಯವಾಗಿ ನಮ್ಮ ಬಸ್ ನಿಲ್ದಾಣಗಳು ಹೇಗಿವೆ ಅನ್ನೋದು ಗೊತ್ತೇ ಇದೆ. ಇಲ್ಲಿ ಮಳೆ ಬಂದರೆ ಸಾಕು ಮಳೆ ನೀರು ಸೋರುವ ಪರಿಸ್ಥಿತಿಯೂ ಕೆಲವೊಂದು ನಿಲ್ದಾಣದಲ್ಲಿ ಇವೆ. ಆದರೆ ಈ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರು, 5 ಸಿಸಿ ಕ್ಯಾಮರಾ, ಉಚಿತ ವೈಫೈ ವ್ಯವಸ್ಥೆ, ಎಸ್‌ಓಎಸ್ ಬಟನ್ ಫ್ಯಾನ್, ನಗರ ಬಸ್‌ಗಳ ಸಮಯ ಮತ್ತು ಮಾಹಿತಿ ನೀಡುವ ಡಿಸ್‌ಪ್ಲೇ, ಅಗ್ನಿಶಾಮಕ ವ್ಯವಸ್ಥೆ, ಎಲ್‌ಇಡಿ ಬೆಳಕು, ಸೆಲ್ಸಿ ಪಾಯಿಂಟ್, ಮೊಬೈಲ್ ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್ ಎಲ್ಲವೂ ಇವೆ.
ಇನ್ನು ಈ ನಿಲ್ದಾಣದ ಮತ್ತೊಂದು ವಿಶೇಷ ಅಂದರೆ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದರೆ ಸೈರನ್ ಹೊಡೆದುಕೊಳ್ಳುತ್ತದೆ. ಇಂತ ಸಮಯದಲ್ಲಿ ಎಸ್ಓಎಸ್ ಬಟನ್ ಕ್ಲಿಕ್ ಮಾಡಿದರೆ ಕೂಡಲೇ ಇಲ್ಲಿ ನಡೆದ ಘಟನೆಯ ದೃಶ್ಯಗಳೂ ಸೇರಿದಂತೆ ಇತರ ಮಾಹಿತಿಗಳು ನೇರವಾಗಿ ಪೊಲೀಸರಿಗೆ ಹೋಗುತ್ತದೆ ಸುರತ್ಕಲ್ ಪೊಲೀಸ್ ಠಾಣೆ, ಠಾಣೆಯ ಇನ್ಸ್ ಪೆಕ್ಟರ್, ಪೊಲೀಸ್ ಕಮೀಷನರ್, ಡಿಸಿಪಿ ಕಾನೂನು ಸುವ್ಯವಸ್ಥೆ ವಿಭಾಗ, 112 ಕಂಟ್ರೋಲ್ ರೂಂಗೆ ಸಂದೇಶ ಹೋಗುವುದರ ಜೊತೆಗೆ ಸಿಸಿ ಟಿವಿಯಲ್ಲಿ ದೃಶ್ಯಗಳು ದಾಖಲಾಗುತ್ತದೆ.