ದೆಹಲಿಯಲ್ಲಿ ಹೊಸವರ್ಷಾಚರಣೆಯಂದು 20ರ ಹರೆಯದ ಅಂಜಲಿ ಸಿಂಗ್ಳನ್ನು ಎಳೆದೊಯ್ದು ಸಾವಿಗೆ ಕಾರಣವಾದ ಕಾರು ಚಲಾಯಿಸಿದ ಆರೋಪ ಹೊತ್ತಿರುವ ವ್ಯಕ್ತಿ ಭಾನುವಾರ ಬೆಳಗ್ಗೆ ದೆಹಲಿಯ ಕಂಝಾವಾಲಾದಲ್ಲಿ ನಡೆದ ಅಪಘಾತದ ವೇಳೆ ವಾಹನದಲ್ಲೇ ಇರಲಿಲ್ಲ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಆರೋಪಿ ದೀಪಕ್ ಖನ್ನಾಗೆ ಆತನ ಸೋದರ ಸಂಬಂಧಿಗಳು ಮತ್ತು ಸ್ನೇಹಿತರ ಪೈಕಿ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಏಕೈಕ ವ್ಯಕ್ತಿಯಾಗಿರುವುದರಿಂದ ಆ ಸಮಯದಲ್ಲಿ ಅವರು ತಮ್ಮೊಂದಿಗೆ ಇದ್ದರು ಎಂದು ಪೊಲೀಸರಿಗೆ ತಿಳಿಸುವಂತೆ ಕೇಳಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ, ಆರೋಪಿ ದೀಪಕ್ ಅವರ ಫೋನ್ ಸ್ಥಳವು ಪ್ರಕರಣದ ಇತರ ನಾಲ್ವರು ಆರೋಪಿಗಳ ಫೋನ್ ಲೊಕೇಷನ್ ಗೆ ಹೊಂದಿಕೆಯಾಗುತ್ತಿಲ್ಲ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಅವರ ಫೋನ್ ಸ್ಥಳ ಮತ್ತು ಕರೆ ದಾಖಲೆಗಳು ಅವರು ಇಡೀ ದಿನ ಮನೆಯಲ್ಲಿದ್ದರು ಎಂದು ತೋರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
26 ವರ್ಷದ ಯುವಕ ದೀಪಕ್ ಗ್ರಾಮೀಣ ಸೇವಾ ಚಾಲಕನಾಗಿದ್ದು, ಪೊಲೀಸರು ಬಂಧಿಸಿದ ಐವರಲ್ಲಿ ಒಬ್ಬ. ಆರೋಪಿಗಳ ವಿಚಾರಣೆ ವೇಳೆ ಎಫ್ಐಆರ್ನಲ್ಲಿ ಹೆಸರಿಸಲಾದ ಐವರಲ್ಲಿ ಒಬ್ಬರಾದ ಅಮಿತ್ ಖನ್ನಾ ಕಾರನ್ನು ಓಡಿಸುತ್ತಿದ್ದರು ಎಂದು ಕಂಡುಬಂದಿದೆ ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಸಾಗರ್ ಪ್ರೀತ್ ಹೂಡಾ ಹೇಳಿದ್ದಾರೆ. ಇದನ್ನು ಸಾಬೀತುಪಡಿಸಲು ತಮ್ಮ ಬಳಿ ವೈಜ್ಞಾನಿಕ ಪುರಾವೆಗಳಿವೆ ಎಂದು ಹೂಡಾ ಹೇಳಿದ್ದಾರೆ.
ಅಪಘಾತದ ನಂತರ ಅಮಿತ್ ತನ್ನ ಸಹೋದರ ಅಂಕುಶ್ ಖನ್ನಾಗೆ ವಿಷಯ ತಿಳಿಸಿದ್ದರು. ನಂತರ ಅಂಕುಶ್ ಅವರು ಆರೋಪ ಹೊರಲು ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ದೀಪಕ್ (ಸೋದರ ಸಂಬಂಧಿ) ಅವರನ್ನು ಸಂಪರ್ಕಿಸಲು ಹೇಳಿದರು. ನಾವು ಅಂಕುಶ್ ಮತ್ತು ಅಶುತೋಷ್ ಎಂಬ ಇನ್ನೊಬ್ಬ ವ್ಯಕ್ತಿಗಾಗಿ ಹುಡುಕುತ್ತಿದ್ದೇವೆ. ಈ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳೂ ಭಾಗಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ, ಆದರೆ ಯಾರು ಚಾಲನೆ ಮಾಡಿದರು ಎಂಬುದು ಸ್ಪಷ್ಟವಾಗಿಲ್ಲ. ಆ ರಾತ್ರಿ ದೀಪಕ್ ಅವರ ಫೋನ್ ಅವರ ಮನೆಯಲ್ಲಿನ ಲೊಕೇಷನ್ ತೋರಿಸಿರೋದನ್ನ ನಾವು ಕಂಡುಕೊಂಡಿದ್ದೇವೆ. ನಿರಂತರ ವಿಚಾರಣೆ ವೇಳೆ ದೀಪಕ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.