ಚೀನಾ, ಅಮೆರಿಕಾ, ಜಪಾನ್, ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಮಹಾಮಾರಿ ಮತ್ತೆ ತನ್ನ ಅಟ್ಟಹಾಸ ತೋರಿಸುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಭಾರತದಲ್ಲೂ ಇದು ಮುಂದಿನ ದಿನಗಳಲ್ಲಿ ಮರುಕಳಿಸಬಹುದು ಎಂಬ ಆತಂಕ ವ್ಯಕ್ತವಾಗಿದ್ದು, ಹೀಗಾಗಿ ಕೇಂದ್ರ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ.
ಚೀನಾ ಸೇರಿದಂತೆ ಕೆಲವೊಂದು ರಾಷ್ಟ್ರಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದ್ದು, ಅಲ್ಲದೆ ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದೆ. ಜೊತೆಗೆ ರಾಜ್ಯ ಸರ್ಕಾರಗಳಿಗೂ ಸಹ ಕೋವಿಡ್ ನಿಯಮ ಪಾಲಿಸುವುದರ ಕುರಿತು ನಿಗಾ ಇರಿಸುವಂತೆ ಸಲಹೆ ನೀಡಲಾಗಿದೆ.
ಇದರ ಮಧ್ಯೆ ಭಾರತದಲ್ಲಿ ಕೋವಿಡ್ ಕೇಸ್ ಇಳಿಕೆಯಾಗಿದ್ದರ ಹಿನ್ನೆಲೆಯಲ್ಲಿ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಿಕೊಳ್ಳಬೇಕು. ಎಂಬ ಲೆಕ್ಕಾಚಾರದಲ್ಲಿದ್ದ ಐಟಿ ಕಂಪನಿಗಳು ಕೋವಿಡ್ ಮತ್ತೆ ಅಬ್ಬರಿಸುವ ಆತಂಕದ ಕಾರಣಕ್ಕೆ ತಮ್ಮ ನಿರ್ಧಾರ ಮರುಪರಿಶೀಲಿಸಲು ಮುಂದಾಗಿವೆ ಎನ್ನಲಾಗಿದೆ. ಈ ವರ್ಷಾಂತ್ಯದವರೆಗೂ ‘ವರ್ಕ್ ಫ್ರಮ್ ಹೋಮ್’ ಮುಂದುವರಿಸಲು ಕೆಲವೊಂದು ಕಂಪನಿಗಳು ಚಿಂತನೆ ನಡೆಸಿವೆ ಎನ್ನಲಾಗಿದೆ.
ಈಗಾಗಲೇ ಒಂದಷ್ಟು ಕಂಪನಿಗಳು ವಾರದಲ್ಲಿ ಮೂರ್ನಾಲ್ಕು ದಿನಗಳ ಕಾಲ ತಮ್ಮ ಉದ್ಯೋಗಿಗಳಿಗೆ ಕಚೇರಿಗೆ ಬರುವಂತೆ ಸೂಚಿಸಿದ್ದು, ಆದರೆ ಬಹಳಷ್ಟು ಕಂಪನಿಗಳು ಈಗಲೂ ಸಹ ವರ್ಕ್ ಫ್ರಮ್ ಹೋಮ್ ನಡೆಸಿಕೊಂಡು ಬಂದಿದ್ದವು. ಮುಂದಿನ 40 ದಿನಗಳು ಭಾರತದ ಪಾಲಿಗೆ ಕಠಿಣವಾಗಿರುವ ಸಾಧ್ಯತೆ ಇದೆ ಎಂಬ ಕೋವಿಡ್ ತಜ್ಞರ ಹೇಳಿಕೆ ಹಿನ್ನೆಲೆಯಲ್ಲಿ ಮತ್ತೆ ವರ್ಕ್ ಫ್ರಮ್ ಹೋಮ್ ಮುಂದುವರಿಸಲು ತೀರ್ಮಾನಿಸಿವೆ ಎಂದು ಹೇಳಲಾಗಿದೆ.