ಈರುಳ್ಳಿ ಪೋಷಕಾಂಶಗಳಿಂದ ತುಂಬಿರುವ ತರಕಾರಿ. ಇದು ಆಯುರ್ವೇದ ಔಷಧವೂ ಹೌದು. ಬಹುತೇಕ ಎಲ್ಲಾ ತಿಂಡಿ ತಿನಿಸುಗಳಿಗೆ ನಾವು ಈರುಳ್ಳಿ ಬಳಸುತ್ತೇವೆ. ಈರುಳ್ಳಿ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಅನೇಕ ರೀತಿಯ ಲಾಭವಿದೆ. ಇದು ನಮ್ಮ ದೇಹಕ್ಕೆ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ಆದರೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸವನ್ನು ಸೇವಿಸಿದರೆ ಅದರಿಂದ ಡಬಲ್ ಲಾಭ ಪಡೆಯಬಹುದು.
ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸವನ್ನು ಕುಡಿದರೆ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ. ಕೂದಲಿನ ಹೊಟ್ಟು ನಿವಾರಣೆಗೆ ನಾವು ಈರುಳ್ಳಿ ರಸವನ್ನು ಬಳಸುತ್ತೇವೆ. ಅದೇ ರೀತಿ ಈರುಳ್ಳಿ ಜ್ಯೂಸ್‌ನ್ನು ನಿಯಮಿತವಾಗಿ ಸೇವನೆ ಮಾಡಿದ್ರೆ ಕೂದಲು ಉದುರುವುದಿಲ್ಲ. ಈರುಳ್ಳಿ ರಸದಲ್ಲಿ ಇನ್ಯುಲಿನ್ ಸಂಯುಕ್ತಗಳಿವೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಅಜೀರ್ಣ ಅಥವಾ ಇತರ ಉದರ ಬಾಧೆಗಳಿರುವವರು ಈರುಳ್ಳಿ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು.
ಈರುಳ್ಳಿ ರಸವು ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್ ಅನ್ನು ಹೊಂದಿರುತ್ತದೆ. ಇದರಿಂದಾಗಿ ಅಧಿಕ ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ. ಹಾಗಾಗಿ ಅಧಿಕ ಬಿಪಿ ಸಮಸ್ಯೆ ಇರುವವರಿಗೂ ಇದು ಪ್ರಯೋಜನಕಾರಿ. ಈರುಳ್ಳಿ ರಸವು ಕೊಬ್ಬು ಮುಕ್ತ ಪಾನೀಯವಾಗಿದೆ. ಹಾಗಾಗಿ ನಿಯಮಿತವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುತ್ತ ಬಂದರೆ ತೂಕವನ್ನು ಸಹ ಇಳಿಸಿಕೊಳ್ಳಬಹುದು. ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ನಾವು ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತೇವೆ. ಈ ಸಮಸ್ಯೆಗೂ ಈರುಳ್ಳಿಯಲ್ಲಿ ಪರಿಹಾರವಿದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸವನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ.