ರೂರ್ಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ನಿವಾಸಕ್ಕೆ ಬರುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಸುಟ್ಟು ಕರಕಲಾಗಿತ್ತು. ಅಪಘಾತದ ನಂತರ ಪಂತ್ ಅವರನ್ನು ತಕ್ಷಣ ಆಂಬುಲೆನ್ಸ್ನಲ್ಲಿ ರೂರ್ಕಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಸ್ಪತ್ರೆ ವೈದ್ಯರ ಹೇಳಿಕೆ ಪ್ರಕಾರ ಪಂತ್ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಈ ಕಾರು ಬೆಂಕಿಗೆ ಆಹುತಿಯಾಗಿರುವುದನ್ನು ನೋಡಿದರೆ ಅದರಲ್ಲಿ ಇದ್ದವರು ಬದುಕಿರುವ ಸಾಧ್ಯತೆಯೇ ಇಲ್ಲ ಎನ್ನಬಹುದು. ಆದರೆ ರಿಷಬ್ ಅವರ ಜೀವ ಕಾಪಾಡಿದ್ದು ಓರ್ವ ಚಾಲಕ ಮತ್ತು ಕಂಡಕ್ಟರ್. ಕಾರಿನಲ್ಲಿ ಇದ್ದುದು ರಿಷಬ್ ಎಂದು ಗೊತ್ತಿಲ್ಲದಿದ್ದರೂ ಮಾನವೀಯತೆ ಮೆರೆದು ಜೀವ ಕಾಪಾಡಿದ್ದಾರೆ ಹರಿಯಾಣ ರಾಜ್ಯ ಸಾರಿಗೆ ನಿಗಮದ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮ್‌ಜೀತ್.
ಇಬ್ಬರನ್ನೂ ಇದಾಗಲೇ ಹರಿಯಾಣ ರಾಜ್ಯ ಸಾರಿಗೆ ಸಂಸ್ಥೆ ಶುಕ್ರವಾರ ಸನ್ಮಾನಿಸಿ, ಗೌರವ ಸಮರ್ಪಣೆ ಮಾಡಿದೆ. ಅಪಘಾತವಾದ ಸಂದರ್ಭದಲ್ಲಿ ಬಸ್ಸಿನಲ್ಲಿದ್ದ ಈ ಇಬ್ಬರು ರಿಷಬ್ ಅವರನ್ನು ಹೊರಕ್ಕೆ ತೆಗೆದಿದ್ದಾರೆ. ಕ್ರಿಕೆಟ್ ನೋಡದ ಇವರಿಬ್ಬರಿಗೂ ಇವರು ರಿಷಬ್ ಎಂದು ತಿಳಿದಿರಲಿಲ್ಲ. ರಿಷಬ್ ಅವರನ್ನು ಹೊರಕ್ಕೆ ತೆಗೆಯುತ್ತಲೇ ಕಾರು ಭಯಾನಕ ಬೆಂಕಿಗೆ ಆಹುತಿಯಾಗಿದೆ.
ಕಂಡಕ್ಟರ್ ಮತ್ತು ಚಾಲಕನಿಗೆ ಅಭಿನಂದನೆಗಳ ಸುರಿಮಳೆ ಬರುತ್ತಿದೆ. ಜಾಲತಾಣದಲ್ಲಿ ಇವರು ಈಗ ನಿಜವಾದ ಹೀರೋ ಎನಿಸಿಕೊಂಡಿದ್ದಾರೆ.