ಬೆಂಡೆಕಾಯಿ ಅತಿ ಹೆಚ್ಚು ಜನ ಇಷ್ಟಪಡುವ ತರಕಾರಿ. ಚಪಾತಿಗೆ ಒಳ್ಳೆಯ ಕಾಂಬಿನೇಶನ್ ಬೆಂಡೆಕಾಯಿ ಪಲ್ಯ.
ಬೆಂಡೆಕಾಯಿಯಿಂದ ಪಲ್ಯ ಮಾತ್ರವಲ್ಲದೆ ಗೊಜ್ಜು ತಯಾರಿಸಿ ಚಪಾತಿ, ರೊಟ್ಟಿ, ಅನ್ನಕ್ಕೂ ಸವಿಯಬಹುದಾದ ಈ ಖಾದ್ಯ ಮಾಡುವ ಕುರಿತು ಇಲ್ಲಿದೆ ಮಾಹಿತಿ.
ಬೇಕಾಗುವ ಸಾಮಗ್ರಿ
ಬೆಂಡೆಕಾಯಿ – 1/4ಕೆಜಿ
ಹಸಿಮೆಣಸಿನ ಕಾಯಿ – 5 ರಿಂದ 6
ತೆಂಗಿನ ತುರಿ – ಒಂದು ಸಣ್ಣ ಹೋಳು
ಕಡಲೆ ಬೇಳೆ – 1ಟೀ ಚಮಚ
ಉದ್ದಿನ ಬೇಳೆ -1 ಟೀ ಚಮಚ
ಬಿಳಿ ಎಳ್ಳು -1 ಟೀ ಚಮಚ
ಹುಣಸೆಹಣ್ಣು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಅರಿಶಿನ ಪುಡಿ – ಸ್ವಲ್ಪ
ಬೆಲ್ಲ – ಒಂದು ಗೋಲಿ ಗಾತ್ರ
ಉಪ್ಪು – ರುಚಿಗೆ ತಕ್ಕಷ್ಟು
ಬೆಂಡೆಕಾಯಿ ಗೊಜ್ಜು ಮಾಡುವ ವಿಧಾನ
ಬೆಂಡೆಕಾಯಿಯನ್ನು ಹೆಚ್ಚಿ, ಅರಿಶಿನ ಸೇರಿಸಿ ಹುರಿದಿಟ್ಟುಕೊಳ್ಳಿ. ಮತ್ತೊಂದು ಬಾಣಲೆಯಲ್ಲಿ ಸ್ವಲ ಎಣ್ಣೆ ಹಾಕಿ ಕಡಲೇ ಬೇಳೆ, ಉದ್ದಿನ ಬೇಳೆ, ಹಸಿ ಮೆಣಸಿನಕಾಯಿ, ಎಳ್ಳು ಇಷ್ಟನ್ನು ಕೆಂಪಗೆ ಹುರಿದು ಮಿಕ್ಸಿ ಜಾರಿಗೆ ಹಾಕಿ. ಇದರ ಜೊತೆಗೆ ಕಾಯಿ ತುರಿ, ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ಈಗ ಹುರಿದ ಬೆಂಡೆಕಾಯಿಗೆ ರುಬ್ಬಿದ ಮಸಾಲೆ ಸೇರಿಸಿ, ಉಪ್ಪು, ಬೆಲ್ಲ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಕುದಿಸಿ ಕೊನೆಯಲ್ಲಿ ಒಗ್ಗರಣೆ ಹಾಕಿ.
ತಯಾರಾದ ಬೆಂಡೆಕಾಯಿ ಗೊಜ್ಜನ್ನು ಬಿಸಿ ಬಿಸಿ ಅನ್ನದ ಜೊತೆ, ಚಪಾತಿಯ ಜೊತೆ ಸವಿಯಿರಿ.