ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಬೆಳ್ಳುಳ್ಳಿ ಇರುತ್ತದೆ. ಆಹಾರಕ್ಕೆ ಪರಿಮಳ, ವಿಶಿಷ್ಟ ರುಚಿ ನೀಡುವಲ್ಲಿ ಇದರ ಪಾತ್ರ ಮಹತ್ವದ್ದು. ಅನೇಕ ಔಷಧೀಯ ಗುಣಗಳಿರುವ ಬೆಳ್ಳುಳ್ಳಿಯನ್ನು ಆಹಾರದಲ್ಲಿ ವಿವಿಧ ರೀತಿಯಲ್ಲಿ ಸೇವಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.
ಬೆಳ್ಳುಳ್ಳಿಯು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ರೋಗ ನಿರೋಧಕ ಶಕ್ತಿ ಹೊಂದಿರುವ ಹಸಿ ಬೆಳ್ಳುಳ್ಳಿಯು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ.
ಅಧಿಕ ರಕ್ತದೊತ್ತಡ, ಆರಂಭಿಕ ಗ್ಯಾಸ್ಟ್ರಿಕ್, ಅಜೀರ್ಣ, ಶ್ವಾಸಕೋಶದ ತೊಂದರೆ, ಆಸ್ತಮಾ ಸಮಸ್ಯೆಗಳಿಗೆ ಇದು ಅತ್ಯುತ್ತಮ ಮನೆಮದ್ದು. ಬೆಳ್ಳುಳ್ಳಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಸಾಂಕ್ರಾಮಿಕ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ದೂರವಿರಬಹುದು. ಕಾರಣ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿ ಈ ಬೆಳ್ಳುಳ್ಳಿಗಿದೆ.
ಕ್ಯಾನ್ಸರ್, ಬೊಜ್ಜು, ಕರುಳು ಹುಣ್ಣು ಇತ್ಯಾದಿಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುವ ಬೆಳ್ಳುಳ್ಳಿಯನ್ನು ಒಗ್ಗರಣೆ, ಚಟ್ನಿ ಮತ್ತು ಚಟ್ನಿ ಪುಡಿಗಳಲ್ಲಿ ಉಪಯೋಗಿಸಿದರೆ ಅನೇಕ ಆರೋಗ್ಯ ತೊಂದರೆಗಳಿಂದ ಮುಕ್ತರಾಗಬಹುದು. ಹಾಗಂತ ಇದರ ಅತಿ ಸೇವನೆಯೂ ಒಳ್ಳೆಯದಲ್ಲ.
ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸಿದರೆ ಅಲ್ಲಿಸಿನ್ ಅಂಶದಿಂದ ಪಿತ್ತಜನಕಾಂಗಕ್ಕೆ ನಂಜುಂಟಾಗಬಹುದು. ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅತಿಸಾರ ಅಥವಾ ಭೇದಿಯುಂಟಾಗಬಹುದು.
ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಎದೆಯುರಿ, ವಾಕರಿಕೆ ಹಾಗೂ ವಾಂತಿ ಉಂಟಾಗಬಹುದು. ಗ್ಯಾಸ್ಟ್ರೋ ಇಸೋಫಿಗಲ್ ರಿಫ್ಲಕ್ಸ್ ರೋಗ ಉಂಟಾಗಬಹುದು. ಅತಿಯಾಗಿ ಸೇವಿಸಿದರೆ ಬಾಯಿಯಿಂದ ದುರ್ವಾಸನೆ ಬರಬಹುದು.