ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ವಿಪರೀತವಾಗಿಬಿಟ್ಟಿದೆ. ಗ್ಯಾಸ್ಟ್ರಿಕ್ ಹಾಗೂ ಆಸಿಡಿಟಿಯಿಂದ ಬೇರೆ ಬೇರೆ ಇತರ ಕಾಯಿಲೆಗಳಿಗೂ ಜನರು ತುತ್ತಾಗ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಂದ್ರೆ ಅದಕ್ಕೆ ಸೂಕ್ತವಾದ ಆಹಾರ ಸೇವನೆ ಮಾಡಬೇಕು. ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡದಂತಹ ನಾಲ್ಕು ತರಕಾರಿಗಳನ್ನು ನಿಮ್ಮ ಡಯಟ್ನಲ್ಲಿ ಸೇರಿಸಿಕೊಳ್ಳಿ.
ಹಸಿರು ಬೀನ್ಸ್: ಆರೋಗ್ಯ ತಜ್ಞರ ಪ್ರಕಾರ ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ ಪೋಷಕಾಂಶಗಳಿಂದ ತುಂಬಿರುವ ಗ್ಯಾಸ್ ಅಲ್ಲದ ತರಕಾರಿಗಳನ್ನೇ ಸೇವಿಸಿ. ಹಸಿರು ಬೀನ್ಸ್ ಕೂಡ ಇವುಗಳಲ್ಲೊಂದು. ಇದರ ಪಲ್ಯ, ಸಾಂಬಾರ್, ಕರಿ ಮಾಡಿ ಸೇವಿಸಬಹುದು. ಆದ್ರೆ ಜೊತೆಗೆ ಆಲೂಗಡ್ಡೆಯನ್ನು ಸೇರಿಸಬೇಡಿ.
ಹೀರೇಕಾಯಿ ಮತ್ತು ಸೋರೆಕಾಯಿ: ಹೀರೇಕಾಯಿ ಮತ್ತು ಸೋರೆಕಾಯಿ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ತರಕಾರಿಗಳು. ಈ ಎರಡೂ ತರಕಾರಿಗಳಲ್ಲಿ ನೀರಿನ ಅಂಶ ಹೇರಳವಾಗಿ ಕಂಡುಬರುತ್ತದೆ. ಈ ಕಾರಣದಿಂದಾಗಿ ಅವುಗಳನ್ನು ಸೇವಿಸುವುದರಿಂದ ಹೊಟ್ಟೆಯ ಅಸ್ವಸ್ಥತೆಗೆ ಪರಿಹಾರ ಸಿಗುತ್ತದೆ. ಗ್ಯಾಸ್-ಆಸಿಡಿಟಿ ಜೊತೆಗೆ ಅಜೀರ್ಣ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ.
ಎಲೆಕೋಸು: ಎಲೆಕೋಸು ಅಸಿಡಿಟಿಗೆ ರಾಮಬಾಣವಿದ್ದಂತೆ. ಎಲೆಕೋಸನ್ನು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಸೇವಿಸಬಹುದು. ಈ ತರಕಾರಿಯಲ್ಲಿರುವ ಪೋಷಕಾಂಶಗಳು ಉದರ ಬಾಧೆಗೆ ಪರಿಹಾರ ನೀಡುತ್ತವೆ. ಎಲೆಕೋಸು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದಿಲ್ಲ.
ಬೆಳ್ಳುಳ್ಳಿ: ಬೆಳ್ಳುಳ್ಳಿ, ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿಗೆ ಶತ್ರುವಿದ್ದಂತೆ. ಬೆಳಗ್ಗೆ ಉಗುರು ಬೆಚ್ಚಗಿನ ನೀರಿನೊಂದಿಗೆ ಎರಡು ಎಸಳು ಬೆಳ್ಳುಳ್ಳಿಯನ್ನು ಸೇವಿಸಿ. ಈ ಮನೆಮದ್ದು ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಗ್ಯಾಸ್ನಿಂದ ಪರಿಹಾರ ನೀಡುತ್ತದೆ ಮತ್ತು ಅಜೀರ್ಣವೂ ದೂರವಾಗುತ್ತದೆ.