ಜೀರಿಗೆ ಇಲ್ಲದೆ ಪ್ರತಿ ಮನೆಯಲ್ಲೂ ಅಡುಗೆಯೇ ಅಪೂರ್ಣ. ಏಕೆಂದರೆ ಜೀರಿಗೆ ಹಾಕದೇ ಇದ್ರೆ ತಿನಿಸುಗಳಿಗೆ ರುಚಿಯೇ ಬರುವುದಿಲ್ಲ. ಟೇಸ್ಟ್ ಜೊತೆಗೆ ಆರೋಗ್ಯಕ್ಕೂ ಜೀರಿಗೆ ಬೇಕೇ ಬೇಕು. ಜೀರಿಗೆಯನ್ನು ಪ್ರತಿದಿನ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಪ್ರಾಚೀನ ಕಾಲದಿಂದಲೂ ಜೀರಿಗೆಯನ್ನು ಬಳಸಲಾಗುತ್ತಿದೆ. ನಿಮಗೆ ಮೊಡವೆ, ಕೊಲೆಸ್ಟ್ರಾಲ್ ಅಥವಾ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಇದ್ದರೆ ಜೀರಿಗೆಯನ್ನು ಸೇವಿಸಿ. ಆದ್ರೆ ಜೀರಿಗೆಯನ್ನು ಯಾವಾಗ ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಕೆಲವೊಮ್ಮೆ ಚಿಕ್ಕ ಚಿಕ್ಕ ವಿಷಯಗಳು ಸಹ ಮರೆತು ಹೋಗುತ್ತವೆ. ಅನೇಕರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಈ ರೀತಿ ಆಗ್ತಾ ಇದ್ರೆ ಮನಸ್ಸನ್ನು ಚುರುಕುಗೊಳಿಸಲು ಖಾಲಿ ಹೊಟ್ಟೆಯಲ್ಲಿ ಜೀರಿಗೆಯನ್ನು ಸೇವಿಸಬೇಕು. ಜೀರಿಗೆಯಲ್ಲಿ ರಿಬೋಫ್ಲಾವಿನ್, ವಿಟಮಿನ್ ಬಿ6, ಜಿಯಾಕ್ಸಾಂಥಿನ್ ಮತ್ತು ನಿಯಾಸಿನ್ ನಂತಹ ಖನಿಜಗಳು ಮತ್ತು ವಿಟಮಿನ್‌ಗಳಿವೆ. ಇದು ಮೆದುಳಿನ ಕಾರ್ಯವನ್ನು ವರ್ಧಿಸುತ್ತದೆ ಮತ್ತು ನಿಮ್ಮ ಸ್ಮರಣೆಯನ್ನು ಉಳಿಸುತ್ತದೆ. ಜೀರಿಗೆ ಮಾನಸಿಕ ಆರೋಗ್ಯವನ್ನು ಸದೃಢವಾಗಿರಿಸುತ್ತದೆ ಮತ್ತು ಮೆದುಳಿನ ಕೋಶಗಳನ್ನು ಪೋಷಿಸುತ್ತದೆ. ಜ್ಞಾಪಕಶಕ್ತಿಯನ್ನು ಚುರುಕುಗೊಳಿಸಲು ಜೀರಿಗೆಯನ್ನು ರಾತ್ರಿ ನೆನೆಸಿ ಬೆಳಗ್ಗೆ ಸೇವಿಸಬೇಕು.
ನಿಮ್ಮ ಹೊಟ್ಟೆಯಲ್ಲಿ ಸಮಸ್ಯೆಯಾಗಿದ್ದರೆ, ಅತಿಸಾರದಿಂದ ಬಳಲುತ್ತಿದ್ದರೆ ಜೀರಿಗೆಯ ಸೇವನೆಯು ನಿಮಗೆ ಪ್ರಯೋಜನಕಾರಿ. ಜೀರಿಗೆಯು ಕರುಳಿಗೆ ಅಗತ್ಯವಾದ ಆಹಾರಗಳಲ್ಲೊಂದು. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಜೀರಿಗೆ ಥೈಮಾಲ್ ಮತ್ತು ಸಾರಭೂತ ತೈಲಗಳನ್ನು ಹೊಂದಿದ್ದು ಅದು ಲಾಲಾರಸ ಗ್ರಂಥಿಯನ್ನು ಉತ್ತೇಜಿಸುತ್ತದೆ. ಆಹಾರ ಚೆನ್ನಾಗಿ ಜೀರ್ಣವಾಗಲು ಜೀರಿಗೆ ತಿನ್ನಬೇಕು.
ತ್ವರಿತ ಜೀರ್ಣಕ್ರಿಯೆಗೆ ಇದು ಸಹಾಯ ಮಾಡುತ್ತದೆ ಮತ್ತು ಚಯಾಪಚಯವನ್ನು ವೇಗಗೊಳಿಸುತ್ತದೆ. ಮಲಬದ್ಧತೆ ಸಮಸ್ಯೆ ಇರುವವರಿಗೂ ಇದು ಪ್ರಯೋಜನಕಾರಿ. ಅಲರ್ಜಿಗಳು ಮತ್ತು ಚರ್ಮದ ಸಮಸ್ಯೆಗಳಿದ್ದರೆ ಜೀರಿಗೆ ಅದನ್ನು ನಿವಾರಿಸುತ್ತದೆ. ಮೊಡವೆಗಳಿಂದ ಬಳಲುತ್ತಿರುವವರಿಗೆ ಜೀರಿಗೆ ಹೆಚ್ಚು ಪ್ರಯೋಜನಕಾರಿ. ಜೀರಿಗೆಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವಿದ್ದು ತ್ವಚೆಯ ಮೇಲಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ಮೊಡವೆಗಳನ್ನು ನಿವಾರಿಸುತ್ತದೆ.
ಅಲರ್ಜಿಯಿಂದ ಉಂಟಾಗುವ ಯಾವುದೇ ಉರಿಯೂತವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಇದಲ್ಲದೆ, ಜೀರಿಗೆ ತಿನ್ನುವುದು ತೂಕ ನಷ್ಟಕ್ಕೆ ಸಹ ಸಹಾಯ ಮಾಡುತ್ತದೆ. ಇದು ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿ. ಜೀರಿಗೆ ಸೇವನೆಗೂ ಮುನ್ನ ಸೂಕ್ತ ವಿಧಾನವನ್ನು ನೀವು ತಿಳಿದುಕೊಳ್ಳಬೇಕು. ಜೀರಿಗೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಅದನ್ನು ಬೆಳಗ್ಗೆ ತಿಂದು ಒಂದು ಲೋಟ ನೀರು ಕುಡಿಯಿರಿ. ಜೀರಿಗೆಯನ್ನು ಬಾಣಲೆಯಲ್ಲಿ ಹುರಿದು ಸಹ ತಿನ್ನಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹುರಿದ ಜೀರಿಗೆಯನ್ನು ಜಗಿದು ತಿನ್ನಿ. ನಂತರ ಉಗುರು ಬೆಚ್ಚಗಿನ ನೀರು ಕುಡಿಯಿರಿ.