ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಚರ್ಮದ ಸೌಂದರ್ಯ ಕಾಪಾಡಿಕೊಳ್ಳಲು ಹತ್ತಾರು ಬಗೆಯ ಕಾಸ್ಮೆಟಿಕ್‌ಗಳನ್ನು ಬಳಸ್ತಿದ್ದಾರೆ. ಆದ್ರೆ ರಾಸಾಯನಿಕಯುಕ್ತ ಈ ಉತ್ಪನ್ನಗಳ ಬದಲು ಬೇವಿನ ಎಲೆಗಳನ್ನು ಬಳಸಿದ್ರೆ ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳು ಪರಿಹಾರವಾಗುತ್ತವೆ.
ಬೇವಿನ ನೀರಿನಿಂದ ಪ್ರತಿದಿನ ಬಾಯಿ ಮುಕ್ಕಳಿಸಿದರೆ ಕೀಟಾಣುಗಳಿಂದ ದೂರವಿರಬಹುದು. ಅದೇ ರೀತಿ ಬೇವಿನ ನೀರಿನಿಂದ ಮುಖ ತೊಳೆಯುವುದರಿಂದ್ಲೂ ಸಾಕಷ್ಟು ಪ್ರಯೋಜನಗಳಿವೆ. ಬೇವು ಎಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಚರ್ಮದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಬೇವಿನ ಸೊಪ್ಪಿನ ನೀರಿನಲ್ಲಿ ಮುಖ ತೊಳೆದರೆ ಚರ್ಮದ ಅಲರ್ಜಿ, ದದ್ದು, ತುರಿಕೆ ಇತ್ಯಾದಿ ಸಮಸ್ಯೆಗಳು ದೂರವಾಗುತ್ತವೆ.
ಬೇವಿನ ನೀರಿನಿಂದ ಮುಖ ತೊಳೆಯುವುದರಿಂದ ಮೊಡವೆಗಳು ನಿವಾರಣೆಯಾಗುತ್ತವೆ. ಏಕೆಂದರೆ ಇದು ಚರ್ಮದ ಮೇಲೆ ಇರುವ ಕೊಳೆ ಮತ್ತು ಎಣ್ಣೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಮೊಡವೆಗಳ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಮೊಡವೆ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಬೇವಿನ ನೀರಿನಿಂದ ನಿಮ್ಮ ಮುಖವನ್ನು ಪ್ರತಿದಿನ ತೊಳೆಯಬಹುದು.
ಬೇವಿನಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ನಂಜುನಿರೋಧಕ ಗುಣಲಕ್ಷಣಗಳು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತವೆ. ಇದು ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ನಿಯಂತ್ರಿಸುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ಬೇವಿನ ನೀರಿನಿಂದ ಮುಖ ತೊಳೆದರೆ ತ್ವಚೆಯ ಬಣ್ಣ ಸಹ ಸುಧಾರಿಸುತ್ತದೆ. ಮುಖದ ಮೇಲಿನ ಕಲೆಗಳು, ಟ್ಯಾನಿಂಗ್ ಮತ್ತು ಕಪ್ಪನ್ನು ಇದು ಹೋಗಲಾಡಿಸುತ್ತದೆ. ಹಾಗಾಗಿ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಪ್ರತಿದಿನ ಬೇವಿನ ನೀರಿನಿಂದ ಮುಖ ತೊಳೆಯಿರಿ.