ಸಾಮಾನ್ಯವಾಗಿ ಮಹಿಳೆಯರು ಕೈ, ಕಾಲುಗಳಲ್ಲಿ ಉಗುರುಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ಉದ್ದದ ಉಗುರುಗಳಿಗೆ ಬಣ್ಣಬಣ್ಣದ ನೇಲ್ ಪಾಲಿಶ್ ಹಚ್ಚಿದರೆ ಸುಂದರವಾಗಿ ಕಾಣುತ್ತದೆ ಅನ್ನೋದು ಸುಳ್ಳಲ್ಲ. ಆದ್ರೆ ಈ ಸುಂದರ ಉಗುರುಗಳಿಂದ ನಮ್ಮ ಆರೋಗ್ಯಕ್ಕೆ ಅನೇಕ ರೀತಿಯ ಅಪಾಯಗಳಿವೆ. ಸಂಶೋಧನೆಯೊಂದರಲ್ಲಿ ಈ ವಿಚಾರ ದೃಢಪಟ್ಟಿದೆ.
ಉದ್ದವಾದ ಉಗುರುಗಳನ್ನು ಟ್ರಿಮ್ ಮಾಡದ ಕಾರಣ, ಹೊರಗಿನ ಕೊಳಕು ಮತ್ತು ಸೂಕ್ಷ್ಮಜೀವಿಗಳು ಉಗುರಿನೊಳಕ್ಕೆ ಸೇರಿಹೋಗುತ್ತವೆ. ಅವು ಆಹಾರದ ಮೂಲಕ ನಮ್ಮ ಹೊಟ್ಟೆ ಸೇರಿ ಅನೇಕ ಅಪಾಯಕಾರಿ ರೋಗಗಳನ್ನು ಹರಡಬಹುದು. ಪಿನ್‌ವರ್ಮ್‌ನಂತಹ ಸಮಸ್ಯೆ ಕೂಡ ಉದ್ಭವಿಸಬಹುದು.
ಪಿನ್‌ವರ್ಮ್ ಅನ್ನೋದು ಕರುಳಿನ ಹುಳುಗಳ ಸೋಂಕಿನ ಒಂದು ವಿಧ. ಇವು ತುಂಬಾ ತೆಳುವಾದ ಮತ್ತು ಬಿಳಿ ಬಣ್ಣದ ಕೀಟಗಳಾಗಿದ್ದು ಒಂದು ಇಂಚಿಗಿಂತಲೂ ಚಿಕ್ಕದಾಗಿರುತ್ತವೆ. ಅನೇಕ ಜನರಿಗೆ ಅದರ ಸೋಂಕಿನ ಬಗ್ಗೆ ತಿಳಿದಿಲ್ಲ. ಈ ಸೋಂಕಿಗೆ ತುತ್ತಾದ್ರೆ ತುರಿಕೆ ಮತ್ತು ನಿದ್ರಾಹೀನತೆ ಉಂಟಾಗುತ್ತದೆ. ಇವು ನಿಮ್ಮ ಉಗುರುಗಳ ಸಹಾಯದಿಂದ ದೇಹವನ್ನು ಪ್ರವೇಶಿಸುತ್ತವೆ.
ಉಗುರುಗಳು ಬೆರಳುಗಳ ತುದಿಯಿಂದ 3 ಮಿಮೀ ಉದ್ದವಿದ್ದರೆ ಅಪಾಯಕಾರಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ. ಇದರಿಂದಾಗಿ ಪಿನ್‌ವರ್ಮ್ ಸೇರಿದಂತೆ ಇತರ ಕಾಯಿಲೆಗಳು ಬರುತ್ತವೆ. ಕೆಲವೊಮ್ಮೆ ಈ ರೀತಿ ಉದ್ದನೆಯ ಉಗುರು ಬಿಡುವುದರಿಂದ ಊತ ಮತ್ತು ನೋವು ಕಾಣಿಸಿಕೊಳ್ಳಬಹುದು. ಉಗುರು ಸುತ್ತಿನ ಸಮಸ್ಯೆ ಕೂಡ ಉಂಟಾಗುವ ಅಪಾಯವಿರುತ್ತದೆ. ಹಾಗಾಗಿ ಉದ್ದನೆಯ ಉಗುರು ಬಿಡಬೇಡಿ.
ಕಾಲಕಾಲಕ್ಕೆ ಟ್ರಿಮ್ ಮಾಡುತ್ತಿರಿ. ಉಗುರುಗಳನ್ನು ಅಗಿಯಬೇಡಿ. ಬಳಕೆಗೆ ಮೊದಲು ಮತ್ತು ನಂತರ ಉಗುರು ಅಂದಗೊಳಿಸುವ ಉಪಕರಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಉಗುರಿನ ಒಳಭಾಗದವರೆಗೆ ಸ್ವಚ್ಛಗೊಳಿಸಿ. ದೀರ್ಘಕಾಲದವರೆಗೆ ಕೃತಕ ಉಗುರು ಬಳಸಬೇಡಿ. ಇತ್ತೀಚಿನ ದಿನಗಳಲ್ಲಿ ಕೃತಕ ಉಗುರಿನ ಬಳಕೆ ಹೆಚ್ಚಾಗಿದೆ. ಇವುಗಳಿಂದ ನಿಮ್ಮ ನೈಸರ್ಗಿಕ ಉಗುರಿಗೆ ಹೊಡೆತ ಬೀಳುತ್ತದೆ. ವಿವಿಧ ರಾಸಾಯನಿಕಗಳನ್ನು ಬಳಸಿ ಕೃತಕ ಉಗುರುಗಳನ್ನು ಅಂಟಿಸುವುದರಿಂದ ಅದು ಮತ್ತಷ್ಟು ಅಪಾಯಕಾರಿ. ಹಾಗಾಗಿ ಸೌಂದರ್ಯಕ್ಕಿಂತ ಆರೋಗ್ಯಕ್ಕೇ ಹೆಚ್ಚಿನ ಒತ್ತು ಕೊಟ್ಟು, ಉಗುರುಗಳ ಸ್ವಚ್ಛತೆಗೆ ಗಮನ ಹರಿಸುವುದು ಉತ್ತಮ.