ಕುಳ್ಳಗಿರಲಿ ಅಥವಾ ಎತ್ತರಕ್ಕಿರಲಿ, ಹೈಹೀಲ್ಸ್ ಧರಿಸೋದು ಹುಡುಗಿಯರ ಫ್ಯಾಷನ್. ಅಪರೂಪಕ್ಕೊಮ್ಮೆ ಹೈಹೀಲ್ಸ್ ಧರಿಸುವವರು ಕೆಲವರಾದ್ರೆ, ಇನ್ನು ಕೆಲವರು ಪ್ರತಿನಿತ್ಯ ಹೀಲ್ಸ್ ಹಾಕ್ತಾರೆ. ಅವರೆಲ್ಲ ಈ ಬಗ್ಗೆ ಸ್ವಲ್ಪ ಗಮನ ಹರಿಸೋದು ಒಳ್ಳೆಯದು, ಯಾಕಂದ್ರೆ ಹೈಹೀಲ್ಸ್ ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ದಿನನಿತ್ಯ ಹೀಲ್ಸ್ ಧರಿಸೋದ್ರಿಂದ ಏನೇನು ದುಷ್ಪರಿಣಾಮಗಳಾಗುತ್ತೆ ಅನ್ನೋದನ್ನು ನೋಡೋಣ.
ಕಾಲುಗಳ ಮೇಲೆ ನೆಗೆಟಿವ್ ಎಫೆಕ್ಟ್ : ಹೀಲ್ಸ್ ಧರಿಸಿದಾಗ ನಿಮ್ಮ ಪಾದಗಳು ಭೂಮಿಯ ಮೇಲೆ ಫ್ಲಾಟ್ ಆಗಿ ಇರುವುದಿಲ್ಲ. ಹಾಗಾಗಿ ಬಹಳ ಸಮಯ ಹೈಹೀಲ್ಸ್ ಹಾಕಿಕೊಂಡಿದ್ರೆ ಪಾದಗಳಿಗೆ ಸರಿಯಾಗಿ ರಕ್ತ ಸಂಚಾರವಾಗುವುದಿಲ್ಲ. ಇದರಿಂದ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಿಮ್ಮಡಿಯ ಮೇಲೆ ಇಡೀ ದೇಹದ ಭಾರ ಬೀಳುವುದರಿಂದ ಹಿಮ್ಮಡಿಗೆ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚು.
ಬೆನ್ನೆಲುಬುಗಳಿಗೂ ಅಪಾಯ : ನಿಮ್ಮ ಪಾದಗಳು ನೆಲದ ಮೇಲೆ ಫ್ಲಾಟ್ ಆಗಿದ್ದಲ್ಲಿ ಬೆನ್ನುಮೂಳೆಗಳ ಮೇಲೆ ಒತ್ತಡ ಬೀಳುವುದಿಲ್ಲ. ಬೆನ್ನುಹುರಿ ಯಾವಾಗಲೂ ಫ್ಲಾಟ್ ಹಾಗೂ ನೇರವಾಗಿರುತ್ತದೆ. ಆದ್ರೆ ಹೀಲ್ಸ್ ಧರಿಸಿದಾಗ ಬೆನ್ನೆಲುಬು ವಕ್ರವಾಗುತ್ತದೆ. ಇದ್ರಿಂದ ಬೆನ್ನು ನೋವು ಮತ್ತು ಬೆನ್ನುಹುರಿಯಲ್ಲಿ ಗಂಭೀರ ಗಾಯಗಳಾಗಬಹುದು.
ಮಂಡಿಗಳ ಮೇಲೂ ನೆಗೆಟಿವ್ ಎಫೆಕ್ಟ್ : ಯಾರು ಸದಾ ಹೈಹೀಲ್ಸ್ ಧರಿಸಿ ಓಡಾಡ್ತಾರೋ ಅವರಿಗೆ ಮಂಡಿ ನೋವು ಬಾಧಿಸುತ್ತದೆ. ಯಾಕಂದ್ರೆ ಹೀಲ್ಸ್ ಹಾಕಿದಾಗ ನಮ್ಮ ಮಂಡಿಗಳು ಸಹಜ ಸ್ಥಿತಿಯಲ್ಲಿರುವುದಿಲ್ಲ. ಜೊತೆಗೆ ಮಂಡಿಯ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಹೈಹೀಲ್ಸ್ ಧರಿಸುವವರಿಗೆ ವಾತದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು.