ಮೊಟ್ಟೆ ಒಂದು ಸಂಪೂರ್ಣ ಆಹಾರ, ಅದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಇದನ್ನು ತಿನ್ನೋದ್ರಿಂದ ಏನು ಲಾಭ ಅನ್ನೋದು ಎಷ್ಟೋ ಜನರಿಗೆ ತಿಳಿದಿಲ್ಲ. ಮೊಟ್ಟೆ ತಿನ್ನೋದ್ರಿಂದ ಏನೇನು ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ.
ಆರೋಗ್ಯಕ್ಕಾಗಿ : ನೀವು ಆರೋಗ್ಯವಾಗಿರಲು ಬಯಸುತ್ತೀರಾ ಅಂತಾದ್ರೆ ಮೊಟ್ಟೆಯನ್ನು ಸೇವಿಸಿ. ಪೌಷ್ಠಿಕಾಂಶಗಳ ಆಗರವಾಗಿರುವ ಮೊಟ್ಟೆಯ ಲೋಳೆಯಲ್ಲಿ ಶೇ.90 ರಷ್ಟು ಕ್ಯಾಲ್ಷಿಯಂ ಮತ್ತು ಕಬ್ಬಿಣದ ಅಂಶವಿದೆ.
ತೂಕ ಇಳಿಸಲು : ಮೊಟ್ಟೆ ತಿನ್ನೋದ್ರಿಂದ ನೀವು ತೂಕ ಕಡಿಮೆ ಮಾಡಿಕೊಳ್ಳಬಹುದು. ಎಷ್ಟೋ ಜನ ಮೊಟ್ಟೆಯಲ್ಲಿ ಕೊಬ್ಬಿನ ಅಂಶವಿದೆ ಎಂದುಕೊಂಡಿದ್ದಾರೆ. ಆದ್ರೆ ಪ್ರತಿ ದಿನ ಬೆಳಿಗ್ಗೆ ತಿಂಡಿಗೆ ಮೊಟ್ಟೆಯನ್ನು ಸೇವಿಸಿದ್ರೆ ನೀವು ತಿಂಗಳಿಗೆ 1 ಕೆಜಿ ತೂಕ ಕಡಿಮೆ ಮಾಡಿಕೊಳ್ಳಬಹುದು.
ಕಡಿಮೆ ಕ್ಯಾಲೋರಿ, ಹೆಚ್ಚು ಪೋಷಕಾಂಶ : ಮಧ್ಯಮ ಗಾತ್ರದ ಒಂದು ಮೊಟ್ಟೆಯಲ್ಲಿ 70-85 ರಷ್ಟು ಕ್ಯಾಲೋರಿ ಇರುತ್ತದೆ. 6.5 ಗ್ರಾಂ ಪೋಷಕಾಂಶವಿರುತ್ತದೆ. ಹಾಗಾಗಿ ನೀವು ಮೂರು ಮೊಟ್ಟೆ ತಿಂದ್ರೆ 19.5 ಗ್ರಾಂ ಪೋಷಕಾಂಶ ನಿಮ್ಮ ದೇಹ ಸೇರುತ್ತದೆ. ಮಹಿಳೆಯರಿಗೆ ಪ್ರತಿ ದಿನ ಕಡಿಮೆ ಅಂದ್ರೂ 50 ಗ್ರಾಂ ಪೋಷಕಾಂಶದ ಅಗತ್ಯವಿರುತ್ತದೆ.
ವಿಟಮಿನ್ ಕೊರತೆ ದೂರ ಮಾಡುತ್ತದೆ : ಚಿಕ್ಕದೊಂದು ಮೊಟ್ಟೆಯಲ್ಲಿ ಹಲವು ಬಗೆಯ ವಿಟಮಿನ್ ಗಳಿರುತ್ತವೆ. ಶರೀರಕ್ಕೆ ಶಕ್ತಿವರ್ಧಕವಾದ ವಿಟಮಿನ್ ಬಿ2 ಮೊಟ್ಟೆಯಲ್ಲಿದೆ. ಕೆಂಪು ರಕ್ತಕಣ ಉತ್ಪಾದಿಸಬಲ್ಲ ಬಿ12 ವಿಟಮಿನ್ ಕೂಡ ಮೊಟ್ಟೆಯಲ್ಲಿದೆ. ಮಕ್ಕಳ ಬೆಳವಣಿಗೆಗೆ ಬೇಕಾದ ವಿಟಮಿನ್ ಇ ಕೂಡ ಮೊಟ್ಟೆಯಲ್ಲಿ ಹೇರಳವಾಗಿದೆ.
ಖನಿಜಾಂಶಗಳ ಕೊರತೆ ದೂರ ಮಾಡುತ್ತದೆ : ಮೊಟ್ಟೆಯಲ್ಲಿ ಕಬ್ಬಿಣ, ಸತು ಮತ್ತು ರಂಜಕದ ಅಂಶವಿದೆ. ಖನಿಜ ನಮ್ಮ ದೇಹಕ್ಕೆ ಬೇಕೇ ಬೇಕು. ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಮಿನರಲ್ಸ್ ಅವಶ್ಯಕತೆಯಿರುತ್ತದೆ. ಮೊಟ್ಟೆ ತಿನ್ನುವುದರಿಂದ ಶರೀರದ ಆಯಾಸ ಕಡಿಮೆಯಾಗುತ್ತದೆ. ಹಲ್ಲು ಮತ್ತು ಮೂಳೆಗಳಿಗೆ ಬೇಕಾದ ರಂಜಕ, ಥೈರಾಯ್ಡ್ ಹಾರ್ಮೋನ್ ಗಳಿಗೆ ಬೇಕಾದ ಅಯೋಡಿನ್ ಅಂಶ ಮೊಟ್ಟೆಯಲ್ಲಿದೆ.
ಸ್ತನ ಕ್ಯಾನ್ಸರ್ ನಿಂದ ಮುಕ್ತಿ : ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಕಾರ ಮೊಟ್ಟೆ ಸೇವನೆಯಿಂದ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಪಾರಾಗಬಹುದು. ಯಾರು ವಾರಕ್ಕೆ ಕನಿಷ್ಟ 6 ಮೊಟ್ಟೆಗಳನ್ನು ಸೇವಿಸ್ತಾರೋ ಅವರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಶೇ.44 ರಷ್ಟು ಕಡಿಮೆಯಾಗುತ್ತದೆ. ಮೊಟ್ಟೆಯನ್ನು ಬೇಯಿಸಿಯೇ ತಿನ್ನಬೇಕೆಂಬ ನಿಯಮವಿಲ್ಲ, ಹೇಗೆ ಬೇಕಾದರೂ ಸೇವಿಸಬಹುದು.