ಮೊಸರು ಆರೋಗ್ಯಕರ ಆಹಾರ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಮೊಸರಿನ ಜೊತೆಗೆ ಇನ್ನು ಕೆಲವೊಂದು ಪದಾರ್ಥಗಳನ್ನು ಬೆರೆಸಿ ಸೇವಿಸಿದ್ರೆ ಹಲವಾರು ಕಾಯಿಲೆಗಳು ಗುಣವಾಗುತ್ತವೆ. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್‌ಗಳು ಸಮೃದ್ಧವಾಗಿದೆ. ಜೊತೆಗೆ ಲ್ಯಾಕ್ಟೋಸ್, ಕಬ್ಬಿಣ ಮತ್ತು ರಂಜಕವೂ ಇದರಲ್ಲಿದೆ. ಇವೆಲ್ಲವೂ ನಿಮ್ಮ ದೇಹಕ್ಕೆ ಅವಶ್ಯಕವಾಗಿರುವ ಪೋಷಕಾಂಶಗಳು.
ಮೊಸರು ಮತ್ತು ಜೀರಿಗೆ: ಮೊಸರು ಮತ್ತು ಜೀರಿಗೆ ಬೆಸ್ಟ್ ಕಾಂಬಿನೇಷನ್, ದಿನೇ ದಿನೇ ಏರ್ತಾ ಇರೋ ತೂಕ ನಿಮಗೆ ತಲೆನೋವಾಗಿದ್ದರೆ ಮೊಸರಿನ ಜೊತೆಗೆ ಜೀರಿಗೆಯನ್ನು ಸೇವಿಸಿ. ಜೀರಿಗೆಯನ್ನು ಚೆನ್ನಾಗಿ ಹುರಿದುಕೊಂಡು ಅದನ್ನು ಮೊಸರಿಗೆ ಬೆರೆಸಿ ಸೇವಿಸಿ. ಇದರಿಂದ ತೂಕ ಕಡಿಮೆಯಾಗುತ್ತದೆ.
ಮೊಸರು ಮತ್ತು ಸಕ್ಕರೆ: ಯಾವುದಾದ್ರೂ ಶುಭ ಕಾರ್ಯಕ್ಕೆ ಹೊರಡುವಾಗ ಮೊಸರು ಸಕ್ಕರೆ ತಿನ್ನುವ ಸಂಪ್ರದಾಯವಿದೆ. ಈ ನಂಬಿಕೆ ಸುಖಾ ಸುಮ್ಮನೇ ಬಂದಿಲ್ಲ. ಮೊಸರು ಮತ್ತು ಸಕ್ಕರೆ ಬೆರೆಸಿ ತಿಂದರೆ ಕಫ ಕಡಿಮೆಯಾಗುತ್ತದೆ. ಜೊತೆಗೆ ನಿಮ್ಮ ದೇಹಕ್ಕೆ ತ್ವರಿತವಾಗಿ ಶಕ್ತಿ ಬರುತ್ತದೆ.
ಮೊಸರು ಮತ್ತು ಕಲ್ಲುಪ್ಪು: ಸೇಂಧಾ ನಮಕ್ ಅಥವಾ ಕಲ್ಲುಪ್ಪನ್ನು ಸಾಮಾನ್ಯವಾಗಿ ಉಪವಾಸದ ಸಮಯದಲ್ಲಿ ಮೇಲೋಗರಗಳಿಗೆ ಹಾಕಲಾಗುತ್ತದೆ. ಮೊಸರಿಗೆ ಈ ಕಲ್ಲುಪ್ಪು ಹಾಕಿಕೊಂಡು ತಿಂದರೆ ಆಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ.
ಮೊಸರು ಮತ್ತು ಓಮ: ಮೊಸರು ಮತ್ತು ಓಮ ಕೂಡ ನಿಮ್ಮನ್ನು ಅನೇಕ ರೋಗಗಳಿಂದ ದೂರವಿಡುತ್ತವೆ. ನೀವು ಹಲ್ಲುನೋವಿನ ಸಮಸ್ಯೆ ಹೊಂದಿದ್ದರೆ ಮೊಸರು ಮತ್ತು ಓಮವನ್ನು ಸೇವಿಸಬೇಕು. ಇದರಿಂದ ಬಾಯಿ ಹುಣ್ಣು ಕೂಡ ನಿವಾರಣೆಯಾಗುತ್ತದೆ.
ಮೊಸರು ಮತ್ತು ಕಾಳು ಮೆಣಸು: ಇವೆರಡನ್ನು ಸೇರಿಸಿ ಬಳಸುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಮೂರು ಚಮಚ ಮೊಸರಿಗೆ ಎರಡು ಚಮಚ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ಕೂದಲಿಗೆ ಹಚ್ಚಿ ಒಂದು ಗಂಟೆ ಹಾಗೇ ಬಿಡಿ, ನಂತರ ತಲೆಸ್ನಾನ ಮಾಡಿ. ಹೀಗೆ ಮಾಡುವುದರಿಂದ ಕೂದಲು ರೇಷ್ಮೆಯಂತೆ ಹೊಳಪು ಪಡೆಯುತ್ತದೆ, ಕೂದಲು ಉದುರುವಿಕೆಯೂ ಕಡಿಮೆಯಾಗುತ್ತದೆ.