ನೀವೇನಾದ್ರೂ ತೂಕ ಇಳಿಸಲು ಸಾಕಷ್ಟು ಕಸರತ್ತು ಮಾಡ್ತಾ ಇದ್ರೆ ಕಾಳು ಮೆಣಸನ್ನೂ ನಿಮ್ಮ ಡಯಟ್ನಲ್ಲಿ ಸೇರ್ಪಡೆ ಮಾಡಿಕೊಳ್ಳಿ. ಕಾಳು ಮೆಣಸನ್ನು ಬಹಳಷ್ಟು ರೀತಿಯಲ್ಲಿ ಬಳಕೆ ಮಾಡಬಹುದು. ಕಾಳು ಮೆಣಸಿನ ಚಹಾ ಮಾಡಿ ಕುಡಿಯಿರಿ ಅಥವಾ ಅಡುಗೆಯಲ್ಲಿ ಕೂಡ ಬಳಕೆ ಮಾಡಿದರೆ ರುಚಿಯೂ ಹೆಚ್ಚುತ್ತದೆ.
ಕಾಳು ಮೆಣಸಿನ ಸೇವನೆಯಿಂದ ತೂಕ ಕಡಿಮೆಯಾಗುವುದು ಮಾತ್ರವಲ್ಲ, ಕಫ, ಕೆಮ್ಮು, ನೆಗಡಿ ಗುಣವಾಗುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಕಾಳು ಮೆಣಸಿನಲ್ಲಿ ಆರೋಗ್ಯಕರ ಕೊಬ್ಬು, ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅಂಶಗಳಿವೆ. ಕ್ಯಾಲೋರಿ ತುಂಬಾ ಕಡಿಮೆಯಿದೆ. ಇದರಲ್ಲಿರುವ ಪೈಪರಿನ್, ಚಯಾಪಚಯವನ್ನು ಸುಲಭಗೊಳಿಸುತ್ತದೆ.
ಕಾಳು ಮೆಣಸಿನ ಚಹಾ ಮಾಡಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಈ ಚಹಾಕ್ಕೆ ಶುಂಠಿ, ಜೇನುತುಪ್ಪ, ತುಳಸಿ, ದಾಲ್ಚಿನ್ನಿ, ನಿಂಬೆ ಮತ್ತು ಗ್ರೀನ್ ಟೀಯನ್ನೂ ಬೆರೆಸಿದ್ರೆ ಇನ್ನೂ ರುಚಿಯಾಗಿರುತ್ತದೆ. ಸಲಾಡ್ ಜೊತೆ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಸೇವಿಸಬಹುದು. ಜ್ಯೂಸ್ ಅಥವಾ ಇತರ ಪಾನೀಯಗಳಿಗೂ ಇದನ್ನು ಹಾಕುವುದರಿಂದ ಟೇಸ್ಟ್ ಕೂಡ ಚೆನ್ನಾಗಿರುತ್ತದೆ.
ಬೆಳಗಿನ ಉಪಾಹಾರದ ಮೊದಲು ಕಾಳುಮೆಣಸಿನ ಚಹಾ ಮತ್ತು ಕಾಳು ಮೆಣಸಿನ ಎಣ್ಣೆಯನ್ನು ಸೇವಿಸಬೇಕು. ಇದರಿಂದ ನೀವು ಹೆಚ್ಚಿನ ಲಾಭವನ್ನು ಪಡೆಯುತ್ತೀರಿ.ಇದಲ್ಲದೆ ಬೆಳಗ್ಗೆ ನಿಮ್ಮ ಡಿಟಾಕ್ಸ್ ಪಾನೀಯಕ್ಕೆ ಕಾಳು ಮೆಣಸಿನ ಪುಡಿಯನ್ನು ಸೇರಿಸಿ. ಒಂದು ಲೋಟ ಹಣ್ಣಿನ ರಸಕ್ಕೆ ಇದನ್ನು ಚಿಟಿಕೆಯಷ್ಟು ಬೆರೆಸಿ ಕುಡಿಯಬಹುದು. ಇದರಿಂದಲೂ ತೂಕ ಕಡಿಮೆಯಾಗುತ್ತದೆ.