ಸಂಜೆ ಬಿಸಿ ಬಿಸಿ ಚಹಾದ ಜೊತೆಗೆ ಕುರುಕಲು ತಿನ್ನಬೇಕು ಎನಿಸುವುದ ಸಹಜ. ಹಾಗಂತ ಅಂಗಡಿಗೆ ಹೋಗಿ ಪ್ಯಾಕೆಟ್ ಸ್ನಾಕ್ಗಳನ್ನು ತಂದು ತಿನ್ನಬೇಡಿ. ಮನೆಯಲ್ಲೇ ರುಚಿಯಾದ ಕುರ್ಕುರೆಯನ್ನು ನೀವು ತಯಾರಿಸಬಹುದು. ಇದನ್ನು ಮಾಡೋದು ಹೇಗೆ ಅನ್ನೋದನ್ನು ನೋಡೋಣ.
ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಅಕ್ಕಿ, ಅರ್ಧ ಚಮಚ ಜೀರಿಗೆ, 1 ಚಮಚ ಕಪ್ಪು ಎಳ್ಳು, ಒಂದೂವರೆ ಕಪ್ ನೀರು, ಅರ್ಧ ಚಮಚ ಅರಿಶಿನ, ಕರಿಯಲು ಎಣ್ಣೆ, ಚಿಟಿಕೆ ಉಪ್ಪು, ಚಿಟಿಕೆ ಸಕ್ಕರೆ.
ಮಾಡುವ ವಿಧಾನ : ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಒಂದು ಬೌಲ್ಗೆ ಹಾಕಿಕೊಂಡು ಅದಕ್ಕೆ ಅರಿಶಿನ, ಜೀರಿಗೆ, ಕಪ್ಪು ಎಳ್ಳು, ಉಪ್ಪು ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ. ಒಂದು ಪ್ಯಾನ್ನಲ್ಲಿ ಈ ಮಿಶ್ರಣವನ್ನು 5 ನಿಮಿಷ ಹುರಿದುಕೊಳ್ಳಿ.
ಪ್ಯಾನ್ನಲ್ಲಿ ನೀರು ಕಾಯಿಸಿಕೊಳ್ಳಿ, ಅದನ್ನು ಅಕ್ಕಿ ಹಿಟ್ಟಿಗೆ ಸ್ವಲ್ಪ ಸ್ವಲ್ಪ ಹಾಕಿ ಮಿಕ್ಸ್ ಮಾಡುತ್ತ ಬನ್ನಿ. ನಂತರ ಕೈಯಿಂದ ಕಲಸಿ. ಹಿಟ್ಟು ರೆಡಿಯಾದ ಬಳಿಕ ಅದನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಂಡು ಕುರ್ಕುರೆ ಆಕಾರಕ್ಕೆ ಲಟ್ಟಿಸಿಕೊಳ್ಳಿ.
ನಂತರ ಕಾಯಿಸಿದ ಎಣ್ಣೆಯಲ್ಲಿ ಅವುಗಳನ್ನು ಕರಿಯಿರಿ. 7-10 ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಕರಿದರೆ ಗರಿಗರಿಯಾದ ಕುರ್ಕುರೆ ಸಿದ್ಧವಾಗುತ್ತದೆ. ಬಿಸಿ ಬಿಸಿ ಇದ್ದಾಗಲೇ ಕೆಂಪು ಮೆಣಸಿನ ಪುಡಿ ಹಾಗೂ ಮಸಾಲೆಗಳು ಬೇಕಾದಲ್ಲಿ ಅದನ್ನು ಹಾಕಿ ಟಾಸ್ ಮಾಡಿ. ಮೇಯೋನೀಸ್ ಜೊತೆಗೆ ಇದನ್ನು ಸವಿಯಬಹುದು.