ಬಿರು ಬೇಸಿಗೆ, ಕೂತಲ್ಲಿ ನಿಂತಲ್ಲಿ ಹರಿಯುವ ಬೆವರು, ಈ ಸಮಯದಲ್ಲಿ ತಣ್ಣಗೇನಾದ್ರೂ ಕುಡಿಯೋಣ ಅನಿಸೋದು ಸಹಜ. ಪ್ರಿಡ್ಜ್‌ನಲ್ಲಿರೋ ನೀರು, ತಂಪು ಪಾನೀಯಗಳು, ಐಸ್ ಕ್ರೀಮ್ ಇತ್ಯಾದಿಗಳನ್ನು ಸವಿಯಲು ಇಷ್ಟವಾಗುತ್ತದೆ. ಆದ್ರೆ ಊಟದ ನಂತರ ಫ್ರಿಡ್ಜ್‌ನಲ್ಲಿಟ್ಟಿರೋ ತಣ್ಣಗಿನ ನೀರನ್ನು ಕುಡಿಯಬೇಡಿ. ಅಕಸ್ಮಾತ್ ಕುಡಿದರೆ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತವೆ.
ಹೊಟ್ಟೆಯ ಬೊಜ್ಜು ಹೆಚ್ಚಾಗುತ್ತದೆ: ಊಟದ ನಂತರ ಫ್ರಿಡ್ಜ್‌ನಲ್ಲಿರೋ ತಣ್ಣೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಕೊಬ್ಬಿನಂಶ ಹಾಗೆಯೇ ಉಳಿದು ಹೋಗುತ್ತದೆ. ತಿಂದಿದ್ದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಪರಿಣಾಮ ಹೊಟ್ಟೆಯಲ್ಲಿ ಕೊಬ್ಬು ಶೇಖರಣೆಯಾಗಬಹುದು.
ಅಜೀರ್ಣ ಸಮಸ್ಯೆ: ತಣ್ಣೀರು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ತಡೆಯುತ್ತದೆ. ಆಹಾರದೊಂದಿಗೆ ಕೋಲ್ಡ್ ವಾಟರ್ ಬೆರೆತಾಗ ಅದರಲ್ಲಿರುವ ಕೊಬ್ಬಿನಂಶ ಗಟ್ಟಿಯಾಗಿಬಿಡುತ್ತದೆ. ಮತ್ತದನ್ನು ಜೀರ್ಣಿಸಿಕೊಳ್ಳಲು ದೇಹ ಹೆಣಗಾಡುತ್ತದೆ.
ತಲೆ ತಿರುಗುವುದು: ದೇಹದ ಅಂಗಗಳಿಗೆ, ವಿಶೇಷವಾಗಿ ಮೆದುಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾದಾಗ ತಲೆ ತಿರುಗಿದ ಅನುಭವವಾಗುತ್ತದೆ. ತಣ್ಣೀರು ದೇಹದ ಚಯಾಪಚಯಕ್ಕೆ ಅಡ್ಡಿಪಡಿಸುತ್ತದೆ ಮತ್ತು ತಾಪಮಾನದ ಹಠಾತ್ ಬದಲಾವಣೆಯು ನಿಮ್ಮ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.
ಮೆದುಳಿನ ಘನೀಕರಣ: ತಣ್ಣೀರು ತಲೆನೋವು ಅಥವಾ ಮೈಗ್ರೇನ್‌ಗೆ ಕಾರಣವಾಗಬಹುದು. ಯಾಕಂದ್ರೆ ಕೋಲ್ಡ್ ವಾಟರ್ ಕುಡಿಯೋದ್ರಿಂದ ಶಾರೀರಿಕ ಕಾರ್ಯಗಳು ದುರ್ಬಲಗೊಳ್ಳುತ್ತವೆ. ಇದು ನಿಮ್ಮ ಮೆದುಳಿನ ಕಾರ್ಯವನ್ನು ಫ್ರೀಜ್ ಮಾಡುತ್ತದೆ ಮತ್ತು ತಲೆತಿರುಗುವಿಕೆಯನ್ನು ಪ್ರಚೋದಿಸುತ್ತದೆ.
ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ : ತಣ್ಣಗಿನ ನೀರು ಕುಡಿಯುವುದರಿಂದ ನರಗಳ ಕಾರ್ಯಕ್ಕೆ ಅಡ್ಡಿಯಾಗಬಹುದು. ಹೃದಯ ಬಡಿತವನ್ನು ಸ್ಥಿರವಾಗಿಡಲು ಸಹಾಯ ಮಾಡುವ ನರಗಳ ಕಾರ್ಯಕ್ಕೆ ಅಡ್ಡಿಯಾದರೆ ಹೃದಯ ಬಡಿತವೇ ನಿಧಾನವಾಗುವ ಅಪಾಯವಿರುತ್ತದೆ.
ಪೋಷಕಾಂಶಗಳ ಕೊರತೆ: ಫ್ರಿಡ್ಜ್ ವಾಟರ್ ಕುಡಿದಾಗ ನಿಮ್ಮ ದೇಹವು ಸಾಮಾನ್ಯ ತಾಪಮಾನಕ್ಕೆ ಮರಳಲು ಹೆಚ್ಚಿನ ಶಕ್ತಿಯನ್ನು ಬಳಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಪೋಷಕಾಂಶಗಳನ್ನು ಹೀರಿಕೊಳ್ಳಲು ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಶಕ್ತಿಯನ್ನು ಬಳಸಲಾಗುವುದಿಲ್ಲ. ಇದು ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುವ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ.
ಗಂಟಲು ನೋವು: ತಣ್ಣೀರು ಅನ್ನನಾಳದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದು ಅನೇಕ ಸೋಂಕುಗಳಿಗೆ ಕಾರಣವಾಗಬಹುದು. ಇದರಿಂದ ಗಂಟಲು ನೋವು ಕೂಡ ಶುರುವಾಗಬಹುದು.
ಕಿರಿದಾದ ಕರುಳು : ತಣ್ಣೀರು ಕರುಳಿನ ಗೋಡೆಯನ್ನು ಕಿರಿದಾಗುವಂತೆ ಮಾಡುವುದರಿಂದ ಆಹಾರ ಹೀರಿಕೊಳ್ಳುವಿಕೆಗೆ ತೊಂದರೆಯಾಗುತ್ತದೆ. ಇದರಿಂದ ಆಹಾರದಲ್ಲಿರುವ ಎಣ್ಣೆಯ ಅಂಶ ಹೆಪ್ಪುಗಟ್ಟುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಕಷ್ಟಕರವಾಗಿಸುತ್ತದೆ.
ಬಾಯಾರಿಕೆ ಉಲ್ಬಣ: ತಣ್ಣೀರು ನಿಮ್ಮ ಬಾಯಾರಿಕೆಯನ್ನು ಹೆಚ್ಚಿಸುತ್ತದೆ. ಹೆಚ್ಹೆಚ್ಚು ನೀರು ಅಥವಾ ಪಾನೀಯಗಳನ್ನು ಕುಡಿಯುವಂತೆ ಮಾಡುತ್ತದೆ. ಇದು ದೇಹದ ಅಸಮತೋಲನಕ್ಕೆ ಕಾರಣವಾಗುತ್ತದೆ. ವ್ಯಾಯಾಮದ ನಂತರ ಕೋಲ್ಡ್ ವಾಟರ್ ಬದಲು ನಾರ್ಮಲ್ ವಾಟರ್ ಅನ್ನೇ ಕುಡಿಯಿರಿ.