ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕುಲು ಒಂದಾಗಿದೆ. ಕುಲು, ಮನಾಲಿಯೊಂದಿಗೆ ಕೇಳಿ ಬರುವ ಸ್ಥಳವಾಗಿದೆ.
ದೇಶದ ರಾಜಧಾನಿ ನವದೆಹಲಿಯಿಂದ ಚಂಡೀಘಡವನ್ನು ತಲುಪಿದ ನಂತರ ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 21 ರಲ್ಲಿ ಸಾಗಿದರೆ, ಹಿಮಾಚಲ ಪ್ರದೇಶಕ್ಕೆ ಪ್ರವೇಶ ಪಡೆಯುತ್ತದೆ.
ಕಣಿವೆ, ಬೆಟ್ಟ ಸಾಲುಗಳನ್ನು ಹಾದು ಹೋಗುವ ಹೆದ್ದಾರಿ ನಿಮ್ಮನ್ನು ಸ್ವರ್ಗಕ್ಕೆ ಕರೆದೊಯ್ದಂತೆ ಭಾಸವಾಗುತ್ತದೆ. ಈ ಹೆದ್ದಾರಿ ಮನಾಲಿವರೆಗೂ ಇದೆ. ಆದರೆ, ನೀವು ಮನಾಲಿ ತಲುಪುವ ಮೊದಲೇ ಸಿಗುವ ಸ್ಥಳ ಕುಲು.
ಹಿಂದೆ ಕುಲಾಂತಿ ಪೀಠ ಎಂದು ಕರೆಯಲ್ಪಡುತ್ತಿದ್ದ ಇದು ಚಂಡೀಘಡದಿಂದ ಸುಮಾರು 233 ಕಿಲೋ ಮೀಟರ್ ದೂರದಲ್ಲಿದೆ.
1220 ಮೀಟರ್ ಎತ್ತರದ ಪ್ರದೇಶವಾಗಿರುವ ಇಲ್ಲಿ ದೇವದಾರು, ಪೈನ್ ಮರಗಳು ಕಾಡಿನ ಸೌಂದರ್ಯವನ್ನು ಹೆಚ್ಚಿಸಿವೆ. ಸೇಬು ಕೃಷಿ ಇಲ್ಲಿ ಪ್ರಮುಖವಾದುದು. ಬಿಯಾಸ್ ನದಿ ಸಮೀಪದಲ್ಲೇ ಇರುವ ಕುಲು, ಬೇಸಿಗೆಯಲ್ಲಿ ಹಿತಾನುಭವ ನೀಡುತ್ತದೆ.
ದೇವಾಲಯ, ಮಂದಿರ, ಆರ್ಟ್ ಗ್ಯಾಲರಿ, ವಿಶೇಷವಾದ ಖಾದ್ಯಗಳು ಕುಲುವಿಗೆ ಬಂದವರಿಗೆ ನೆನಪಿನಲ್ಲಿ ಉಳಿಯುತ್ತವೆ. ನಯನ ಮನೋಹರವಾದ ಕುಲು ಸೌಂದರ್ಯವನ್ನೊಮ್ಮೆ ನೋಡಿ ಬನ್ನಿ.
ಕುಲು ಸುತ್ತಮುತ್ತ ಅನೇಕ ಪ್ರವಾಸಿ ಸ್ಥಳಗಳಿವೆ. ಮೊದಲೇ ಮಾಹಿತಿ ಪಡೆದುಕೊಂಡು ಹೋದರೆ, ಅನುಕೂಲವಾಗುತ್ತದೆ.