ಕಟ್ ಸಾರು ಅಥವಾ ನಿಂಬೆಹಣ್ಣಿನ ರಸಂ ಉಡುಪಿಯ ಅತ್ಯಂತ ಜನಪ್ರಿಯ ಖಾದ್ಯ. ಇದನ್ನು ಮಾಡೋದು ಸುಲಭ, ತಿನ್ನಲು ಬಹಳ ರುಚಿಕರ. ಚಳಿಗಾಲಕ್ಕಂತೂ ಇದು ಹೇಳಿ ಮಾಡಿಸಿದಂತಹ ಸಾರು. ಅನ್ನ ಮತ್ತು ಉಪ್ಪಿನಕಾಯಿ ಜೊತೆ ಕಟ್ ಸಾರು ಇದ್ರೆ ಅದರ ಮಜಾನೇ ಬೇರೆ. ಅಷ್ಟೇ ಅಲ್ಲ ಶೀತಕ್ಕೂ ಇದು ಒಳ್ಳೆಯ ಮದ್ದು.
ಬೇಕಾಗುವ ಸಾಮಗ್ರಿ :
ಮುಕ್ಕಾಲು ಕಪ್ ತೊಗರಿಬೇಳೆ, ಹೆಚ್ಚಿದ ಟೊಮೆಟೋ, ಒಂದು ಇಂಚಿನಷ್ಟು ಉದ್ದದ ಶುಂಠಿ ಹೆಚ್ಚಿದ್ದು, ಮುಕ್ಕಾಲು ಚಮಚ ಅರಿಶಿನ, ಸಣ್ಣಗೆ ಹೆಚ್ಚಿದ 2 ಹಸಿಮೆಣಸು, ಅರ್ಧ ನಿಂಬೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಮುಕ್ಕಾಲು ಚಮಚ ಸಾಸಿವೆ, ಅರ್ಧ ಚಮಚ ಉದ್ದಿನ ಬೇಳೆ, ಅರ್ಧ ಚಮಚ ಜೀರಿಗೆ, ಚಿಟಿಕೆ ಇಂಗು, ಕರಿಬೇವು, ಎರಡು ಚಮಚ ಎಣ್ಣೆ.
ತಯಾರಿಸುವ ವಿಧಾನ :
ತೊಳೆದಿಟ್ಟ ತೊಗರಿಬೇಳೆ, ಟೊಮೆಟೋ, ಹಸಿಮೆಣಸಿನ ಕಾಯಿ, ಶುಂಠಿ, ಅರಿಶಿನ, ಉಪ್ಪು ಮತ್ತು ಮೂರು ಕಪ್ ನೀರು ಬೆರೆಸಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. 5-6 ವಿಶಲ್ ಆಗುವವರೆಗೆ ಬೇಯಿಸಿ. ಪ್ರೆಶರ್ ಕುಕ್ಕರ್ ತಣ್ಣಗಾದ ಬಳಿಕ ಬೆಂದ ಬೇಳೆಯನ್ನು ಚೆನ್ನಾಗಿ ಹಿಸುಕಿ ಮಿಕ್ಸ್ ಮಾಡಿ. ಬೇಕಿದ್ದಲ್ಲಿ ನೀರು ಮತ್ತು ಉಪ್ಪನ್ನು ಬೆರೆಸಿ. ಒಲೆ ಮೇಲಿಟ್ಟು ಕುದಿ ಬಂದ ಬಳಿಕ ಕೆಳಕ್ಕಿಳಿಸಿ. ಚಿಕ್ಕ ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ. ಅದು ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಮತ್ತು ಇಂಗನ್ನು ಹಾಕಿ ಚಟಪಟಾಯಿಸಿ. ವಗ್ಗರಣೆಯನ್ನು ಕಟ್ ಸಾರಿಗೆ ಹಾಕಿ, ಬಳಿಕ ನಿಂಬೆ ರಸ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿದರೆ ರುಚಿಯಾದ ಕಟ್ ಸಾರು ಸವಿಯಲು ಸಿದ್ಧ.