ಮನೆ ಕಂಪ್ಲೀಟ್ ಆಗಬೇಕಿದ್ದರೆ ವಾಸ್ತು ಇರಲೇಬೇಕು. ವಾಸ್ತುಪ್ರಕಾರ ಮನೆ ಕಟ್ಟದೇ ಇದ್ದರೆ ಎಷ್ಟೇ ಐಷಾರಾಮಿಯಾಗಿ ಕಟ್ಟಿದ್ರೂ ಮುಂದೆ ತೊಂದರೆ ಎದುರಿಸಬೇಕಾದೀತು. ಹೀಗಾಗಿ ಬಹುತೇಕ ಎಲ್ಲರೂ ಮನೆಯ ಬ್ಲೂ ಪ್ರಿಂಟ್ ತಯಾರಿಸುವಾಗಲೇ ವಾಸ್ತು ಪ್ರಕಾರವಾಗಿಯೇ ನಿರ್ಮಿಸುತ್ತಾರೆ. ಇನ್ನು ಮನೆ ಅಂದ್ಮೇಲೆ ಪೂಜಾ ಕೊಠಡಿಯ ನಂತರ ಅತ್ಯಂತ ಪವಿತ್ರ ಸ್ಥಾನ ಎಂದು ಕರೆಯಲ್ಪಡುವುದು ಅಡುಗೆ ಕೋಣೆ.
ಅಡುಗೆ ಕೋಣೆಯ ವಿನ್ಯಾಸ ಮತ್ತು ಪೀಠೋಪಕರಣಗಳಿಗೆ ನೀವು ಎಷ್ಟೇ ಖರ್ಚು ಮಾಡಿದರೂ ಕೂಡ ಅಡುಗೆ ಮನೆಗೆ ವಾಸ್ತು ಇರಲೇಬೇಕು. ಅಡುಗೆ ಕೋಣೆ ಅಂದ್ರೆ ಆಹಾರ ತಯಾರಿಸುವ ವಿಭಾಗ. ಆದ್ದರಿಂದ, ಇದು ತೃಪ್ತಿ ಮತ್ತು ಪೋಷಣೆಯನ್ನು ಪ್ರತಿನಿಧಿಸುತ್ತದೆ. ಆಹಾರ ನಮ್ಮ ಹಸಿವನ್ನು ನೀಗಿಸುವುದು ಮಾತ್ರವಲ್ಲ, ಅನಾರೋಗ್ಯವನ್ನು ದೂರವಿರಿಸುತ್ತದೆ.
ವಾಸ್ತುಶಾಸ್ತ್ರದ ದೃಷ್ಟಿಕೋನದಿಂದ ಅಡುಗೆ ಮನೆಯು ಪ್ರಮುಖವಾಗಿ ಅಗ್ನಿಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ, ಅದರ ಸರಿಯಾದ ನಿಯೋಜನೆಯು ಅತ್ಯಂತ ಮಹತ್ವದ್ದಾಗಿದೆ. ಅದರ ಸರಿಯಾದ ನಿಯೋಜನೆಯು ಅತ್ಯಂತ ಮಹತ್ವದ್ದಾಗಿದೆ. ಅದನ್ನು ಪರಿಪೂರ್ಣ ಸಮತೋಲನದಲ್ಲಿ ಇರಿಸಿದರೆ, ಅದು ಅಗ್ನಿಯ ವಾಸ್ತು ಪ್ರಯೋಜನಗಳನ್ನು ತರುತ್ತದೆ. ಹಾಗೆ ಮಾಡದಿದ್ದಲ್ಲಿ ಅದು ಅಪಘಾತಗಳ ರೂಪದಲ್ಲಿ ದುರಂತ ಫಲಿತಾಂಶವನ್ನು ತರಬಹುದು. ವಸತಿ ಸ್ಥಳಗಳಲ್ಲಿ ಸಂಭವಿಸುವ ಹೆಚ್ಚಿನ ಬೆಂಕಿ ಅವಘಡ ಅಡುಗೆ ಪ್ರದೇಶದಲ್ಲಿ ಸಂಭವಿಸುತ್ತದೆ.
ವಾಸ್ತು ಪ್ರಕಾರವಿದ್ದರೆ ಅದು ಅಡುಗೆ ಮನೆಯ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರಿ, ನಕರಾತ್ಮಕತೆಯನ್ನು ತೊಡೆದು ಹಾಕುತ್ತದೆ. ಇದರಿಂದ ಆರೋಗ್ಯವು ಕೂಡ ವೃದ್ಧಿಸುತ್ತದೆ. ಮನೆಯಲ್ಲಿ ಬೆಂಕಿಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡಲು ಕೂಡ ಸಹಾಯವಾಗುತ್ತದೆ. ವಾಸ್ತು ಪ್ರಕಾರವಿರದ ಅಡುಗೆ ಮನೆಯು ಆರ್ಥಿಕ ಹೊರೆ, ಕಾನೂನು ಸಮಸ್ಯೆಗಳು ಮತ್ತು ಕೌಟುಂಬಿಕ ವಿವಾದ ಇತ್ಯಾದಿಗಳು ಉಂಟಾಗಬಹುದು. ಹೀಗಾಗಿ ಪ್ರತಿ ಅಡುಗೆಮನೆಗೆ ವಾಸ್ತು ಇರಲೇಬೇಕು ಎಂಬುದು ವಾಸ್ತುಶಾಸ್ತ್ರಜ್ಞರ ಅಭಿಪ್ರಾಯ.
ವಾಸ್ತು ಪ್ರಕಾರ ಪ್ರತಿಯೊಂದು ಮನೆಯೂ, ಭೂಮಿ, ಆಕಾಶ, ಗಾಳಿ, ಬೆಂಕಿ ಮತ್ತು ನೀರಿನ ಅಂಶಗಳ ಸರಿಯಾದ ಸಮತೋಲನವನ್ನು ಹೊಂದಿರಬೇಕು. ಅಗ್ನಿಯ ಅಧಿಪತಿಯು ಮನೆಯ ಆಗ್ನೇಯ ದಿಕ್ಕಿನಲ್ಲಿರುತ್ತಾನೆ. ಅಂದರೆ ಅಡುಗೆಮನೆಯ ಆದರ್ಶ ಸ್ಥಾನವು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿದೆ. ಹೀಗಾಗಿ ಈ ದಿಕ್ಕು ಬೆಂಕಿಯನ್ನು ಇರಿಸಲು ಉತ್ತಮವಾದ ದಿಕ್ಕಾಗಿದೆ. ಅಡುಗೆ ಮಾಡುವಾಗ ಪೂರ್ವಕ್ಕೆ ಮುಖ ಮಾಡಿ ನಿಲ್ಲಬೇಕು. ಒಂದು ವೇಳೆ ಈ ದಿಕ್ಕಿನಲ್ಲಿ ಇರಿಸಲಾಗದಿದ್ದರೆ ವಾಯುವ್ಯ, ಪಶ್ಚಿಮ ದಿಕ್ಕಿನಲ್ಲೂ ಇರಿಸಬಹುದು.
ಆದರೆ, ಯಾವುದೇ ಕಾರಣಕ್ಕೂ ಉತ್ತರ, ಈಶಾನ್ಯ, ನೈಋತ್ಯ ವಲಯಗಳಲ್ಲಿ ಇರಿಸುವುದು ತರವಲ್ಲ ಎಂಬುದು ವಾಸ್ತಶಾಸ್ತ್ರಜ್ಞರ ಅಭಿಮತವಾಗಿದೆ. ಇದು ಕುಟುಂಬದಲ್ಲಿ ಉದ್ವಿಗತೆ ಉಂಟು ಮಾಡಬಹುದು ಹಾಗೂ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಲೂ ಕಾರಣವಾಗಬಹುದು. ಅಲ್ಲದೆ, ಬಾತ್ರೂಮ್ ಮತ್ತು ಅಡುಗೆಮನೆಯನ್ನು ಯಾವತ್ತೂ ಕೂಡ ಒಂದಕ್ಕೊಂದು ಹೊಂದಿಕೊಂಡು ಇರುವಂತೆ ಇರಿಸಬೇಡಿ.
ಅಡುಗೆ ಮನೆಯ ವಾಯುವ್ಯ ದಿಕ್ಕಿನಲ್ಲಿ ಸಿಂಕ್ ಅನ್ನು ಇರಿಸಬೇಕು. ಈಶಾನ್ಯ ಭಾಗದಲ್ಲಿ ನೀರಿನ ಪಾತ್ರೆಗಳು ಮತ್ತು ನೀರಿನ ಶುದ್ಧೀಕರಣವನ್ನು ಇರಿಸಬೇಕು ಎಂಬುದು ವಾಸ್ತುಶಾಸ್ತ್ರಜ್ಞರು ಹೇಳುತ್ತಾರೆ. ಇನ್ನು ಅಡುಗೆ ಮನೆಯು ಕಿಟಕಿಗಳನ್ನು ಹೊಂದಿರಬೇಕು. ಗಾಳಿ ಹಾಗೂ ಸಾಕಷ್ಟು ಬೆಳಕನ್ನು ಹೊಂದಿರಬೇಕು. ಕಿಟಕಿ ಹಾಗೂ ಎಕ್ಸಾಸ್ಟ್ ಫ್ಯಾನ್ ಅನ್ನು ಪೂರ್ವದಲ್ಲಿ ಇರಿಸಬೇಕು. ಶೇಖರಣಾ ವಸ್ತುಗಳನ್ನು ಸಾಧ್ಯವಾದಷ್ಟು ಅಡುಗೆಮನೆಯ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನ ಗೋಡೆಗಳ ಮೇಲೆ ಇಡಬೇಕು.
ವಾಸ್ತುಪ್ರಕಾರ ಅಡುಗೆ ಮನೆಯ ಗಾತ್ರ ಕೂಡ ಬಹಳ ಮುಖ್ಯವಾಗಿದೆ. ಆದ್ಯತೆಯ ಗಾತ್ರವು 80 ಚದರ ಅಡಿ ಅಥವಾ ಅದಕ್ಕಿಂತ ಹೆಚ್ಚಿರಬೇಕು. ಅಡುಗೆ ಕೋಣೆ ತುಂಬಾ ಚಿಕ್ಕದಾಗಿದ್ದರೆ, ಅದು ಮನೆಯ ಮಹಿಳೆಯರ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ.
ಇನ್ನು ಅಡುಗೆ ಮನೆಯ ಪ್ರವೇಶದ್ವಾರ ಉತ್ತರ, ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿರಬೇಕು. ಗ್ಯಾಸ್ ಸಿಲಿಂಡರ್ ಅನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಹಾಗೆಯೇ ಫ್ರಿಡ್ಜ್ ಅನ್ನು ದಕ್ಷಿಣ, ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿಡಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಾಗೆಯೇ ಅಡುಗೆ ಕೋಣೆಯ ಗೋಡೆಗೆ ಹಾಕುವ ಬಣ್ಣ ಕೂಡ ವಾಸ್ತು ನಿರ್ಧರಿಸುತ್ತದೆ. ಬಿಳಿ, ಹಳದಿ, ತಿಳಿ ನೀಲಿ ಹಾಗೂ ತಿಳಿ ಕಂದು ಬಣ್ಣದ್ದಾಗಿರಬೇಕು. ಬಿಳಿ ಬಣ್ಣಕ್ಕೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ಇದ್ದರೆ, ಕೆಂಪು ಬಣ್ಣವನ್ನು ಹಾಕಲೇಬಾರದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.