ಮನೆಯಲ್ಲಿ ಪ್ರತಿ ದಿನ ನಾವು ಅನೇಕ ವಸ್ತುಗಳನ್ನು ಬಳಸ್ತೇವೆ. ಕೆಲಸದ ಒತ್ತಡಗಳಿಂದಾಗಿ ಅವುಗಳನ್ನು ಮತ್ತೆ ಮತ್ತೆ ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಾವು ಸ್ವಚ್ಛ ಮಾಡಿದ ಮೇಲೆಯೂ ಅವುಗಳಲ್ಲಿ ಕೀಟಾಣುಗಳು ಉಳಿಯಬಹುದು. ಹಾಗೆ ಕೀಟಾಣುಗಳು ಅವಿತಿರುವಂತ ಕೆಲವು ಗೃಹಬಳಕೆಯ ವಸ್ತುಗಳನ್ನು ಬಗ್ಗೆ ನಾವು ಹೇಳ್ತೀವಿ. ಇವುಗಳ ಸ್ವಚ್ಛತೆಯ ಬಗ್ಗೆ ನೀವು ಗಮನ ಹರಿಸಲೇಬೇಕು. ಇಲ್ಲವಾದ್ರೆ ಖಾಯಿಲೆ ಕಾಡುತ್ತದೆ.
ಆಫೀಸ್ ಕೆಲಸ ಮುಗಿಸಿ ಬಂದ ಮಹಿಳೆಯರಿಗೆ ದಿನವೂ ಮನೆಯನ್ನು ಮನೆಯ ಎಲ್ಲ ವಸ್ತುಗಳನ್ನು ಸ್ವಚ್ಛಗೊಳಿಸುವುದು ಅಸಾಧ್ಯ. ಆದರೂ ಈಗ ನಾವು ಹೇಳುವ ಕೆಲವು ವಸ್ತುಗಳನ್ನು ನೀವು ನಿಯಮಿತವಾಗಿ ಸ್ವಚ್ಛಗೊಳಿಸಲೇಬೇಕು.
ಎಲೆಕ್ಟ್ರಿಕ್ ಸಾಮಾನುಗಳು : ಈಗಿನ ಕಾಲದಲ್ಲಿ ಎಲ್ಲರ ಮನೆಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಾನಿಕ್ ಐಟಮ್ ಗಳು ಕಾಣಸಿಗುತ್ತವೆ. ಪ್ರತಿ ದಿನ ಒಂದಲ್ಲ ಒಂದು ಕಾರಣಕ್ಕೆ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯಾಗುತ್ತವೆ. ಆದ್ರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದಿಲ್ಲ. ಇದ್ರಲ್ಲಿ ಹೆಚ್ಚಿನ ಕೀಟಾಣುಗಳಿರುತ್ತವೆ.
ಬಾಗಿಲ ಹ್ಯಾಂಡಲ್ : ಮನೆ ಬಾಗಿಲು, ಹ್ಯಾಂಡಲ್ ಪ್ರತಿ ದಿನ ಬಳಕೆಯಾಗುತ್ತದೆ. ಮನೆ ಮಂದಿಯೆಲ್ಲ ಇದನ್ನು ಬಳಸುತ್ತಾರೆ. ಹಾಗಾಗಿ ಇದು ಒಂದು ರೀತಿಯಲ್ಲಿ ಸಾಂಕ್ರಾಮಿಕ ರೋಗವನ್ನು ಹರಡುವ ಮೂಲವಾಗಿದೆ. ಇದನ್ನು ಪದೇ ಪದೇ ಸ್ವಚ್ಛಗೊಳಿಸಬೇಕು. ಇದಲ್ಲದೇ ಫ್ರಿಜ್ ನ ಹ್ಯಾಂಡಲ್, ವಾರ್ಡ್ ರೋಬ್ ಹ್ಯಾಂಡಲ್ ಗಳನ್ನು ಕೂಡ ಸ್ವಚ್ಛಗೊಳಿಸಬೇಕು.
ಪಾತ್ರೆ ತೊಳೆಯುವ ಸ್ಕ್ರಬರ್ : ನಾವು ಕೊಳೆಯಾದ ಪಾತ್ರೆಯನ್ನು ತೊಳೆಯುಲು ಬಳಸುವ ಸ್ಕ್ರಬರ್ ಅನ್ನು ಪ್ರತಿನಿತ್ಯ ಸ್ವಚ್ಛವಾಗಿ ತೊಳೆದಿಡಬೇಕು. ಹಾಗೆ ತೊಳೆಯದೇ ಇದ್ದಲ್ಲಿ ಅದರಲ್ಲಿ ಕೀಟಾಣುಗಳು ಹುಟ್ಟುತ್ತವೆ. ಸ್ಕ್ರಬರನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿ ನಂತರ ಅದನ್ನು ಮೈಕ್ರೊವೇವ್ ನಲ್ಲಿ ಇಡಬಹುದು. ಹೀಗೆ ಮಾಡುವುದರಿಂದ ಸ್ಕ್ರಬರ್ ನಲ್ಲಿರುವ ಕೀಟಾಣುಗಳು ನಾಶವಾಗುತ್ತವೆ.
ಶೌಚಾಲಯದ ಹೊರಭಾಗ : ಎಲ್ಲರೂ ಟಾಯ್ಲೆಟ್ ಅನ್ನು ಪದೇ ಪದೇ ಸ್ವಚ್ಛಗೊಳಿಸುತ್ತಾರೆ. ಟಾಯ್ಲೆಟ್ ನ ಒಳಭಾಗವನ್ನು ಸ್ವಚ್ಛಗೊಳಿಸಿದ ಹಾಗೆಯೇ ಸೀಟ್, ಮುಚ್ಚಳ, ಟ್ಯಾಂಕ್, ಸ್ಟ್ಯಾಂಡ್, ಫ್ಲಶ್ ಹ್ಯಾಂಡಲ್ ಗಳನ್ನು ಕೂಡ ಕ್ಲೀನರ್ ಗಳಿಂದ ಸ್ವಚ್ಛಗೊಳಿಸಬೇಕು.
ಸ್ವಿಚ್ ಬೋರ್ಡ್ : ದಿನಕ್ಕೆ ಅದೆಷ್ಟೋ ಬಾರಿ ಸ್ವಿಚ್ ಬೋರ್ಡ್ ಗಳನ್ನು ಮುಟ್ಟುತ್ತೇವೆ. ಇದು ಕೂಡ ಬಾಗಿಲ ಹ್ಯಾಂಡಲ್ ನಂತೆಯೇ ಕೀಟಾಣುಗಳ ಆಗರವೇ ಸರಿ. ಆದ್ದರಿಂದ ಸ್ವಿಚ್ ಬೋರ್ಡ್ ಗಳನ್ನು ಕ್ಲೀನಾಗಿಟ್ಟುಕೊಳ್ಳಬೇಕು. ಹೀಗೆ ಸ್ವಿಚ್ ಬೋರ್ಡ್ ಗಳನ್ನು ಸ್ವಚ್ಛಗೊಳಿಸುವಾಗ ಕರೆಂಟ್ ತಗುಲದಂತೆ ಎಚ್ಚರ ವಹಿಸಬೇಕು.
ಟಿವಿ ರಿಮೋಟ್ : ಮನೆಯಲ್ಲಿ ಟಿವಿ ನೋಡುವವರು ಹೆಚ್ಚು ಚಾನೆಲ್ ಬದಲಾಯಿಸುತ್ತಾರೆ. ಅದಕ್ಕೆ ರಿಮೋಟ್ ಬೇಕೇ ಬೇಕು. ಕೈಯಿಂದ ಕೈಗೆ ಹೋಗುವ ಈ ರಿಮೋಟ್ ನಲ್ಲಿ ಕೂಡ ಅದೆಷ್ಟೋ ಕೀಟಾಣುಗಳು ಮನೆಮಾಡಬಹುದು. ರಿಮೋಟ್ ನ ಸೆಲ್ ಮತ್ತು ಬ್ಯಾಟರಿಗಳನ್ನು ತೆಗೆದು ಅದನ್ನು ಕೂಡ ಸ್ವಚ್ಛಗೊಳಿಸುವುದು ಒಳ್ಳೆಯದು.