ಗೊರಕೆ ಹೊಡೆಯುವುದು ಅತ್ಯಂತ ಕಿರಿಕಿರಿಯ ವಿಚಾರವಾಗಿದೆ. ಅದರಲ್ಲೂ ಈ ಗೊರಕೆ ಹೊಡೆಯುವವರ ಪಕ್ಕದಲ್ಲಿ ಮಲಗುವವರ ಕಷ್ಟವಂತೂ ಹೇಳತೀರದು. ರಾಷ್ಟ್ರೀಯ ನಿದ್ರಾ ಫೌಂಡೇಷನ್ ನೀಡಿರುವ ಮಾಹಿತಿಯ ಪ್ರಕಾರ ಮೂವರು ಪುರುಷರಲ್ಲಿ ಒಬ್ಬರು ಹಾಗೂ ನಾಲ್ಕು ಮಹಿಳೆಯರಲ್ಲಿ ಒಬ್ಬರು ಗೊರಕೆಯ ಅಭ್ಯಾಸ ಹೊಂದಿದ್ದಾರೆ. ಗೊರಕೆ ಒಂದು ಸಣ್ಣ ವಿಚಾರವಾಗಿದ್ದರೂ ಸಹ ಇದೊಂದು ಕಿರಿಕಿರಿಯ ವಿಚಾರ ಎಂಬುದನ್ನೂ ಅಲ್ಲಗಳೆಯುವಂತಿಲ್ಲ. ಹಾಗಾದರೆ ಗೊರಕೆ ಸಮಸ್ಯೆಯಿಂದ ಪಾರಾಗಲು ಇಲ್ಲೊಂದಿಷ್ಟು ಪರಿಹಾರವಿದೆ ;
ಸ್ಥೂಲಕಾಯ ಅಥವಾ ತೂಕ ಹೆಚ್ಚಳ :
ಸ್ಥೂಲಕಾಯ ಅಥವಾ ತೂಕ ಹೆಚ್ಚಳ ಹೊಂದಿರುವವರು ಸಾಮಾನ್ಯವಾಗಿ ಈ ಗೊರಕೆ ಸಮಸ್ಯೆ ಹೊಂದಿರುತ್ತಾರೆ. ಇಂತವರು ತನ್ನ ತೂಕವನ್ನು ಇಳಿಸಿಕೊಳ್ಳುವುದರಿಂದ ಗೊರಕೆ ಸಮಸ್ಯೆಯಿಂದ ಪಾರಾಗಬಹುದಾಗಿದೆ.
ತೂಕ ಹೆಚ್ಚಳ ಹೊಂದಿರುವವರು ಕುತ್ತಿಗೆಯ ಭಾಗದಲ್ಲಿ ಹೆಚ್ಚಿನ ಮಾಂಸವನ್ನು ಹೊಂದಿರುತ್ತಾರೆ. ಇದರಿಂದ ಉಸಿರಾಟ ಸರಿಯಾಗಿ ಆಗುವುದಿಲ್ಲ. ಹೀಗಾಗಿ ನೀವು ತೂಕ ಇಳಿಸಿಕೊಂಡಲ್ಲಿ ಖಂಡಿತವಾಗಿಯೂ ಗೊರಕೆಯಿಂದ ಪಾರಾಗಲಿದ್ದೀರಿ.
ನಿದ್ರಾಭಂಗಿ :
ಅಂಗಾತ ಮಲಗಿದವರಲ್ಲಿ ಗೊರಕೆಯ ಸಮಸ್ಯೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಆದಷ್ಟು ಮಗ್ಗುಲಲ್ಲಿ ಮಲಗಲು ಯತ್ನಿಸಿ.
ಮೂಗು ಕಟ್ಟಿಕೊಳ್ಳುವುದು :
ಕೆಲವರಿಗೆ ರಾತ್ರಿ ವೇಳೆ ಮೂಗು ಕಟ್ಟಿಕೊಳ್ಳುವ ಸಮಸ್ಯೆ ಇರುತ್ತೆ. ಈ ರೀತಿ ಮೂಗು ಬ್ಲಾಕ್ ಆದರೆ ಉಸಿರಾಟ ಸರಿಯಾಗಿ ಆಗುವುದಿಲ್ಲ ಈ ಸಂದರ್ಭದಲ್ಲಿಯೂ ನೀವು ಗೊರಕೆ ಹೊಡೆಯಲಿದ್ದೀರಿ. ಹೀಗಾಗಿ ನಾಸಲ್ ಆಯಿಲ್ ಡ್ರಾಪ್ಗಳನ್ನು ನೀವು ಮಲಗುವ ಮುಂಚೆ ಬಳಸುವುದು ಸೂಕ್ತ.
ನೀರು ಕುಡಿಯಿರಿ :
ಗೊರಕೆ ಸಮಸ್ಯೆ ಮಾತ್ರವಲ್ಲ ಸಂಪೂರ್ಣ ಆರೋಗ್ಯವನ್ನು ಕಾಪಾಡಿಕೊಳ್ಳುಬಲ್ಲಿ ನೀರು ಸೇವನೆ ಅತ್ಯಂತ ಮುಖ್ಯವಾಗಿದೆ. ದೇಹವು ನಿರ್ಜಲೀಕರಣಗೊಂಡಾಗ ಕೂಡ ಗೊರಕೆ ಬರುವ ಸಾಧ್ಯತೆ ಇದೆ ಹೀಗಾಗಿ ಪುರುಷರು ನಿತ್ಯ 3-4 ಲೀಟರ್ ನೀರು ಹಾಗೂ ಮಹಿಳೆಯರು 2-3 ಲೀಟರ್ ನೀರು ಸೇವನೆ ಮಾಡಬೇಕು.
ಧೂಮಪಾನ ಹಾಗೂ ಮದ್ಯಪಾನ
ಧೂಮಪಾನ ಹಾಗೂ ಮದ್ಯಪಾನ ಮಾಡುವವರಿಗೂ ಗೊರಕೆ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಧೂಮಪಾನ ಹಾಗೂ ಮದ್ಯಪಾನ ಬಿಡುವುದೇ ಇದಕ್ಕೆ ಪರಿಹಾರ. ಇದು ಸಾಧ್ಯವೇ ಆಗದ ಪಕ್ಷದಲ್ಲಿ ಕನಿಷ್ಟ ಮಲಗುವ ಮುನ್ನವಾದರೂ ಧೂಮಪಾನ ಹಾಗೂ ಮದ್ಯಪಾನ ಮಾಡಬೇಡಿ.