ಸಮತೋಲಿತ ಆರೋಗ್ಯಕ್ಕಾಗಿ ನಿದ್ರೆಯ ಅಗತ್ಯವೇನೆಂದು ನಾವೀಗಾಗಲೇ ಬಹಳಷ್ಟು ಬಾರಿ ಓದಿ ತಿಳಿದಿರುತ್ತೇವೆ.
ದೇಹದ ತೂಕ ಕಾಪಾಡಿಕೊಳ್ಳಲು ಕಠಿಣ ಪಥ್ಯಗಳನ್ನು ಪಾಲಿಸುವ ನಾವು ನಿದ್ರೆಯ ಬಗ್ಗೆ ಅಷ್ಟಾಗಿ ಗಮನ ನೀಡುವುದಿಲ್ಲ.
ದಿನವೊಂದರಲ್ಲಿ ಕನಿಷ್ಠ 7 ಗಂಟೆಗಳ ಕಾಲ ನಿದ್ರೆ ಮಾಡಿದರೆ ದೇಹದ ರೋಗ ನಿರೋಧಕ ಶಕ್ತಿ ಉತ್ತಮವಾಗಿ, ಸಣ್ಣ ಪುಟ್ಟ ಜ್ವರ, ಕೆಮ್ಮುಗಳನ್ನು ಬಾರದಂತೆ ನೋಡಿಕೊಳ್ಳಬಹುದಾಗಿದೆ. ಅಧ್ಯಯನದ ಪ್ರಕಾರ ಮೇಲ್ಕಂಡ ವಿವರಗಳು ಕಂಡು ಬಂದಿವೆ.
“ದಿನವೊಂದರಲ್ಲಿ ಮೆದುಳು ನಂಜಿನ ಉತ್ಪಾದನೆ ಮಾಡಲಿದ್ದು, ಇವುಗಳು ಹೆಚ್ಚಾಗಿ ಸಂಗ್ರಹವಾದರೆ ಡೆಮೆಂಟಿಯಾ ಹಾಗೂ ಅಲ್ಜೀಮರ್‌ನಂಥ ನರಸಂಬಂಧಿ ರೋಗಗಳು ಬರುವ ಸಾಧ್ಯತೆ ಇರುತ್ತದೆ. ನಾವು ಸರಿಯಾಗಿ ನಿದ್ರಿಸಿದರೆ ಮೆದುಳು ಇಂಥ ನಂಜಿನ ಉತ್ಪಾದನೆ ಮಾಡುವುದಿಲ್ಲ. ಹಾಗೆ ಮಾಡಿದಲ್ಲಿ ಮೆದುಳಿನಿಂದ ಸೃಷ್ಟಿಯಾಗುವ ಸೆರೆಬ್ರಲ್ ದ್ರವವು ಮೆದುಳಿನಲ್ಲಿ ಸಂಗ್ರಹವಾಗಿರುವ ನಂಜನ್ನು ತೆಗೆದುಹಾಕುತ್ತದೆ,” ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ನಿದ್ರೆಯಲ್ಲಿ ಕೇವಲ ಒಂದು ಗಂಟೆ ವ್ಯತ್ಯಾಸವಾದರೂ ನಮ್ಮ ದೇಹದ ಆಂತರಿಕ ಗಡಿಯಾರದ ಕಾರ್ಯವೈಖರಿ ಹಾಳಾಗುತ್ತದೆ, ನಿದ್ರೆಯಲ್ಲಿ ಒಂದೇ ಒಂದು ಗಂಟೆ ವ್ಯತ್ಯಾಸವಾದರೂ ಸಹ ದೇಹವನ್ನು ಹೊಸ ವಲಯಕ್ಕೆ ಕೊಂಡೊಯ್ಯುವ ಸಂಬಂಧ ಸೂಚನೆಗಳನ್ನು ಮೆದುಳು ನೀಡುವ ಕಾರಣ ಈ ವ್ಯತ್ಯಾಸ ಆಗಲಿದೆ ಎನ್ನುತ್ತಾರೆ ತಜ್ಞರು.