ಇತ್ತೀಚೆಗೆ ಹಲವರು ಎದುರಿಸುತ್ತಿರುವ ಸಮಸ್ಯೆಯಲ್ಲಿ ನಿದ್ರಾಹೀನತೆಯೂ ಒಂದು. ಕೆಲಸದ ಒತ್ತಡ, ಚಿಂತೆ ಅಥವಾ ಇನ್ಯಾವುದೋ ಮಾನಸಿಕ, ದೈಹಿಕ ತೊಂದರೆಗಳಿಂದಾಗಿ ನಿದ್ರಾಹೀನತೆ ಕಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಆದ್ರೆ ವಿಟಮಿನ್ ಕೊರತೆಯಿಂದಲೂ ನಿದ್ರಾಹೀನತೆ ಉಂಟಾಗಬಹುದು. ಹೌದು ವಿಟಮಿನ್ ಬಿ 12 ಕೊರತೆಯಿಂದ ಹಲವರಿಗೆ ನಿದ್ರೆಯ ಸಮಸ್ಯೆ ಉಂಟಾಗುತ್ತದೆ.
ವಿಟಮಿನ್ ಬಿ12 ಗೆ ಕೋಬಾಲಮಿನ್ ಎಂಬ ಹೆಸರಿನಿಂದ ಕರೆಯುತ್ತಾರೆ. ಇದು ನಮ್ಮ ಶರೀರದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುತ್ತದೆ.
ವಿಟಮಿನ್ ಬಿ12 ಕೊರತೆಯಿಂದ ಸುಸ್ತು, ನಿಶ್ಶಕ್ತಿ ಆಗಬಹುದು. ಅಲ್ಲದೇ ರಕ್ತದ ಕೊರತೆ, ನಿದ್ರಾಹೀನತೆ, ಚರ್ಮ ನೀಲಿಯಾಗುವುದು, ಮರೆವಿನ ಸಮಸ್ಯೆ ಅಥವಾ ಜೀರ್ಣಕ್ರಿಯೆಯ ಮೇಲೆ ಪ್ರಭಾವವುಂಟಾಗುತ್ತದೆ. ಕೈ, ಕಾಲುಗಳಲ್ಲಿ ನೋವು ಅಥವಾ ಹೃದಯ ಬಡಿತ ಹೆಚ್ಚಾಗುವ ಸಮಸ್ಯೆಯೂ ಕಾಡುತ್ತದೆ. ಹಾಗಾಗಿ ಇದ್ಯಾವುದೇ ಲಕ್ಷಣ ಕಂಡು ಬಂದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಆದಷ್ಟು ಬೇಗ ಬಿ12 ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆಯಿರಿ.