ನಾಯಕನಹಟ್ಟಿ ಚಿತ್ರದುರ್ಗ ಜಿಲ್ಲೆಯಲ್ಲಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ನಾಯಕನಹಟ್ಟಿಗೆ ಎಲ್ಲಾ ಕಡೆಯಿಂದಲೂ ಬಸ್ ಸೌಲಭ್ಯವಿದೆ.
ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳ ದೇವಾಲಯ ಇಲ್ಲಿದ್ದು, ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ. ದೇವಾಲಯದ ರಾಜಗೋಪುರ, ಮುಸ್ಲಿಂ ಶೈಲಿಯ ಹೊರ ಮಠ, ಸ್ವಾಮೀಜಿಯವರು ಕಟ್ಟಿಸಿದ ಹಿರೇಕೆರೆ ಮೊದಲಾದ ನೋಡಬಹುದಾದ ಸ್ಥಳಗಳು ಇಲ್ಲಿವೆ.
ನಾಯಕನಹಟ್ಟಿ ಜಾತ್ರೆ ಭಾರೀ ಫೇಮಸ್. ಬಹುದೊಡ್ಡದಾದ ರಥೋತ್ಸವ ವರ್ಷಕ್ಕೊಮ್ಮೆ ನಡೆಯಲಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಸ್ವಾಮೀಜಿಯವರ ಪವಾಡಗಳ ಬಗ್ಗೆ ಹಿರಿಯರು ಹೇಳುವುದನ್ನು ಕೇಳಬೇಕು.
ಇಲ್ಲಿ ಮುಕ್ತಿ ಬಾವುಟ ಹರಾಜು ನಡೆಯಲಿದ್ದು, ಶ್ರೀಮಂತರು, ರಾಜಕಾರಣಿಗಳು ಪೈಪೋಟಿಗೆ ಬಿದ್ದು, ಲಕ್ಷಾಂತರ ರೂಪಾಯಿಗೆ ಅದನ್ನು ಹರಾಜಿನಲ್ಲಿ ಪಡೆಯುತ್ತಾರೆ.
ಮುಕ್ತಿ ಬಾವುಟ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಅದನ್ನು ಪಡೆದುಕೊಳ್ಳಲು ಭಾರೀ ಪೈಪೋಟಿಯೇ ನಡೆಯುತ್ತದೆ.
ನಾಯಕನಹಟ್ಟಿಯಿಂದ ಸುಮಾರು 4-5 ಕಿಲೋ ಮೀಟರ್ ದೂರದಲ್ಲಿ ಹೊಸಗುಡ್ಡದ ಕೋಟೆಯೊಳಗೆ ಬಂಡೆಯನ್ನು ಕೊರೆದು ನಿರ್ಮಿಸಿದ ರಾಮಲಿಂಗೇಶ್ವರ ಗುಹಾಂತರ ದೇವಾಲಯವಿದೆ. ಈ ಬೆಟ್ಟದ ಮೇಲಿನಿಂದ ಸುತ್ತಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.